ಬೆಂಗಳೂರು: ಅಪ್ರಾಪ್ತ ವಯಸ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಅಪರಾಧ ತನಿಖಾ ದಳ (ಸಿಐಡಿ) ನೋಟಿಸ್ ಜಾರಿ ಮಾಡಿದೆ. ಆದರೆ ವಿಚಾರಣೆಗೆ ಹಾಜರಾಗಲು ಜೂನ್ ೧೭ರವರೆಗೆ ಕಾಲಾವಕಾಶ ನೀಡುವಂತೆ ಯಡಿಯೂರಪ್ಪ ಸಿಐಡಿಗೆ ಮನವಿ ಮಾಡಿದ್ದಾರೆ.
ಕಳೆದ ಮಾರ್ಚ್ ೧೪ರಂದು ರಾತ್ರಿ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿ, ತಾವು ಹಾಗೂ ತಮ್ಮ ಅಪ್ರಾಪ್ತ ಪುತ್ರಿ ಮಾಜಿ ಸಿಎಂ ಯಡಿಯೂರಪ್ಪ ಅವರ ಬಳಿ ತಮ್ಮ ವೈಯಕ್ತಿಕ ಸಮಸ್ಯೆ ಹೇಳಿಕೊಳ್ಳಲು ೨೦೨೪ರ ಫೆಬ್ರವರಿ ೨ರಂದು ಬೆಳಗ್ಗೆ ೧೧ ಗಂಟೆಗೆ ಹೋಗಿದ್ದಾಗ ಅವರು ಅಪ್ರಾಪ್ತ ಪುತ್ರಿಯ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ದೂರು ನೀಡಿದ್ದರು. ಈ ದೂರು ಆಧರಿಸಿ ಸದಾಶಿವ ನಗರ ಠಾಣೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣವನ್ನು ನಂತರ ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಸಿಐಡಿ, ಕಳೆದ ಮಾರ್ಚ್ ೨೮ರಂದು ನೀಡಿದ್ದ ನೋಟಿಸ್‌ನಂತೆ ವಿಚಾರಣೆಗೆ ಹಾಜರಾಗಿ ಯಡಿಯೂರಪ್ಪ ಹೇಳಿಕೆ ನೀಡಿದ್ದರು.
ತನಿಖೆ ವಿಳಂಬ ಆಗುತ್ತಿದೆ ಎಂಬ ದೂರಿನ ಬೆನ್ನಲ್ಲೇ ಸಿಐಡಿ ಮತ್ತೊಂದು ನೋಟಿಸ್‌ನ್ನು ನೀಡಿ, ಜೂನ್ ೧೨ರಂದು ಬೆಳಗ್ಗೆ ೧೦ ಗಂಟೆಗೆ ಸಿಐಡಿ ಕಚೇರಿಗೆ ವಿಚಾರಣೆಗೆ ಬರುವಂತೆ ತಿಳಿಸಿದ್ದರು.
ಆದರೆ ಜೂನ್ ೧೭ರವರೆಗೆ ಕಾಲಾವಕಾಶ ಕೊಡುವಂತೆ ಕೋರಿ ಯಡಿಯೂರಪ್ಪ ಪತ್ರ ಬರೆದಿದ್ದಾರೆ. ಈ ಮಧ್ಯೆ ಯಡಿಯೂರಪ್ಪ ಮಂಗಳವಾರ ತಡರಾತ್ರಿ ದೆಹಲಿಗೆ ತೆರಳಿದ್ದು ಬುಧವಾರ ಸಿಐಡಿ ಎದುರು ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಸಿಐಡಿಯ ಮುಂದಿನ ನಡೆ ಕುತೂಹಲ ಕೆರಳಿಸಿದೆ.
ಈ ಮಧ್ಯೆ ಪ್ರಕರಣದಲ್ಲಿ ಇನ್ನೂ ಮೂವರ ವ್ಯಕ್ತಿಗಳನ್ನು ಬುಧವಾರ ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು ದಿನವಿಡೀ ಅವರ ವಿಚಾರಣೆ ನಡೆಸಿದ್ದಾರೆ.
ಎಸ್‌ಪಿಪಿ ನೇಮಕ
ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ವಾದ ಮಂಡಿಸಲು ರಾಜ್ಯ ಸರಕಾರ ಬುಧವಾರ ಹಿರಿಯ ವಕೀಲ ಅಶೋಕ್ ಎಸ್.ನಾಯಕ್ ಅವರನ್ನು ಸ್ಪೆಶಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗೆ ನೇಮಕ ಮಾಡಿದೆ.