ಸುವರ್ಣ ವಿಧಾನಸೌಧ: ಮಾಜಿ ಸಚಿವ ಶಾಮನೂರ ಮಲ್ಲಿಕಾರ್ಜುನ ಅವರು ವನ್ಯಜೀವಿಗಳನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ, ಕೂಡಲೇ ಅವರನ್ನು ಬಂಧಿಸುವಂತೆ ಆಗ್ರಹಿಸಿ ದಾವಣಗೆರೆ ಬಿಜೆಪಿ ಕಾರ್ಯಕರ್ತರು ಸುವರ್ಣ ಸೌಧ ಎದುರು ಮುತ್ತಿಗೆ ಹಾಕಲು ಯತ್ನಿಸಿದರು.
ಕಾಡುಗಳ್ಳ ವೀರಪ್ಪನ್ ಹೋಲುವ ಚಿತ್ರದ ಮಾದರಿಯಲ್ಲೇ ಮಲ್ಲಿಕಾರ್ಜುನ ಅವರ ಭಾವಚಿತ್ರ ಅಳವಡಿಸಿ ಪ್ಲೇ ಕಾರ್ಡ್ ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು.
ವನ್ಯ ಜೀವಿಗಳ ಬೇಟೆಯಾಡಿರುವ ಮಲ್ಲಿಕಾರ್ಜುನ ಅವರನ್ನು ಕೂಡಲೇ ಬಂಧಿಸಬೇಕು, ಅವರನ್ನು ರಕ್ಷಿಸುವಲ್ಲಿ ತೊಡಗಿರುವ ಡಿಎಫ್ಓ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸುವರ್ಣ ಸೌಧದ ಪ್ರವೇಶ ದ್ವಾರದ ಮುಂದೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ವನ್ಯಜೀವಿಗಳ ಕೊಲೆ ಮಾಡಿರುವುದು ಅಕ್ಷಮ್ಯ ಅಪರಾಧ, ಅಧಿಕಾರ ದುರಪಯೋಗ ಪಡಿಸಿಕೊಂಡು ಈ ಪ್ರಕರಣದಿಂದ ಬಚಾವ್ ಆಗಲು ಪ್ರಯತ್ನ ನಡೆಸುತ್ತಿದ್ದಾರೆ, ಈ ವಿಷಯಾವಾಗಿ ಅಲ್ಲಿನ ಡಿಎಫ್ಓ ಸಹ ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಮಲ್ಲಿಕಾರ್ಜುನ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.