ಮಾಜಿ ಮೇಯರ್ ಡಿ.ಕೆ. ಚವ್ಹಾಣ 75 ನೇ ವಯಸ್ಸಲ್ಲಿ 2ನೇ ಮದುವೆ

ಮದುವೆ
Advertisement

ಹುಬ್ಬಳ್ಳಿ: ಮದುವೆ ಸ್ವರ್ಗದಲ್ಲಿ ನಿಶ್ಚಯ ಎನ್ನುತ್ತಾರೆ. ಋಣಾನುಬಂಧ ಕೂಡಿ ಬರಬೇಕು ಎನ್ನುತ್ತಾರೆ. ಈ ಮಾತು ಹೌದು ಎಂಬುವಂತೆ ಇಲ್ಲೊಬ್ಬ ಹಿರಿಯರು ತಮ್ಮ ೭೫ನೇ ವಯಸ್ಸಿನಲ್ಲಿ ಮತ್ತೆ ಮದುವೆಯಾಗಿದ್ದಾರೆ!
ಬಹುಶಃ ಈ ವಯಸ್ಸಿನಲ್ಲಿ ಮದುವೆಯಾಗುವಂತಹ ನಿರ್ಧಾರ ಕೈಗೊಳ್ಳುವವರು ವಿರಳ. ಆದರೆ, ಈ ವಯಸ್ಸಿನಲ್ಲಿ ಮತ್ತೊಂದು ಮದುವೆಯಾಗಿ ಗಮನ ಸೆಳೆದಿದ್ದಾರೆ. ಹೀಗೆ ಮತ್ತೊಂದು ಮದುವೆ ಆದವರು ಬೇರೆ ಯಾರೂ ಅಲ್ಲ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್ ಡಿ.ಕೆ.ಚವ್ಹಾಣ ಅವರು. ಹೌದು ಒಂದು ಕ್ಷಣ ನಿಮಗೆ ಅಚ್ಚರಿ ಎನಿಸಿದರೂ ಇದನ್ನು ನಂಬಲೇಬೇಕು.
ಹೀಗೆ ಮದುವೆ ಆಗುವುದಕ್ಕೂ ಕಾರಣವುಂಟು ಎನ್ನುತ್ತಾರೆ ಅವರ ಆಪ್ತರು. ಚವ್ಹಾಣ ಅವರ ಮೊದಲ ಪತ್ನಿ ಶಾರದಾ ಅವರು ಕಳೆದ ಮೂರು ತಿಂಗಳ ಹಿಂದೆ ನಿಧನರಾಗಿದ್ದರು. ಪತ್ನಿಯ ಅಗಲಿಕೆಯ ಬಳಿಕ ನೊಂದಿದ್ದ ಡಿ.ಕೆ.ಚವ್ಹಾಣ ಅವರು ಏಕಾಂತದಲ್ಲಿ ಸಮಯ ಕಳೆಯುತ್ತಿದ್ದರು. ಇಳಿಸಂಜೆ ವಯಸ್ಸಿನಲ್ಲಿ ಆರೈಕೆ, ಆಸರೆಗಾಗಿ ಮತ್ತೊಂದು ಮದುವೆ ಮಾಡಿಕೊಳ್ಳುವ ಚಿಂತನೆ ಮಾಡಿದ್ದರು. ಈ ಹಂತದಲ್ಲಿ ಅವರು ಮದುವೆ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದು ಅವರ ಪತ್ನಿಯ ತಂಗಿ ಅನಸೂಯಾ ಅವರನ್ನು. ಅನಸೂಯಾ ಅವರೂ ವಿವಾಹವಾಗಿರಲಿಲ್ಲ. ಹೀಗಾಗಿ, ಅವರನ್ನು ಮದುವೆ ಮಾಡಿಕೊಂಡು ಎರಡನೇ ಸಲ ದಾಂಪತ್ಯ ಜೀವನಕ್ಕೆ ಪ್ರವೇಶ ಮಾಡಿದ್ದಾರೆ ಎಂದು ಅವರ ಬಂಧುಗಳು, ಆಪ್ತರು ಹೇಳುವ ಮಾತು.
ಚವ್ಹಾಣ ಅವರ ನಿವಾಸದ ಮುಂದೆಯೇ ಮದುವೆ ಸಮಾರಂಭ ನಡೆದಿದ್ದು, ಈ ಮದುವೆಯಲ್ಲಿ ಅವರ ಮೂವರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಆಪ್ತರು, ಬಂಧುಗಳು ಪಾಲ್ಗೊಂಡಿದ್ದರು.