ಮಹಿಳಾ ಕುಸ್ತಿಪಟುಗಳ ಮೇಲೆ ಪರಾಕ್ರಮ ಸಲ್ಲ

Advertisement

ದೆಹಲಿಯಲ್ಲಿ ಕಳೆದ ಒಂದು ತಿಂಗಳಿನಿಂದ ಮಹಿಳಾ ಕುಸ್ತಿ ಪಟ್ಟುಗಳು ಕುಸ್ತಿ ಫೆಡರೇಷನ್ ಅಧ್ಯಕ್ಷರ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಬೇಡಿಕೆಯನ್ನು ಸಹಾನುಭೂತಿಯಿಂದ ನೋಡದೆ ರಾಜಕೀಯ ಕಾರಣಗಳಿಗಾಗಿ ನಿರ್ಲಕ್ಷ್ಯ ತೋರುವುದು ಸರ್ವಥಾ ಸರಿಯಲ್ಲ. ಇದು ಅಮಾನವೀಯ, ಅನಾಗರಿಕ. ಯಾವ ಸರ್ಕಾರವೂ ಈ ಕೆಲಸ ಮಾಡಬಾರದು. ಅದರಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ನಿರ್ಲಜ್ಜೆಯ ಕೆಲಸ ನಡೆಯುತ್ತಿರುವುದು ದೇಶದ ಎಲ್ಲ ನಾಗರಿಕರೂ ತಲೆ ತಗ್ಗಿಸಬೇಕಾದ ವಿಚಾರ. ಮಹಿಳಾ ಕುಸ್ತಿಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದು ಬಂದಾಗ ಅವರನ್ನು ಹಾಡಿಹೊಗಳಿದ ನಾಯಕರು ಇಂದು ಅವರ ಬಗ್ಗೆ ತೋರುತ್ತಿರುವ ಉದಾಸೀನ ಧೋರಣೆ ಖಂಡಿತ ಒಪ್ಪತಕ್ಕದ್ದಲ್ಲ. ಮಹಿಳಾ ಕುಸ್ತಿ ಪಟುಗಳು ಮಾಡಿರುವ ಆರೋಪಗಳಲ್ಲಿ ಸತ್ಯಾಂಶ ಇಲ್ಲದೆ ಇರಬಹುದು. ಆದರೆ ತನಿಖೆಯಂತೂ ನಡೆಯಬೇಕು. ಎಫ್‌ಐಆರ್ ದಾಖಲಿಸುವುದಕ್ಕೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕಾಯಿತು ಎಂದರೆ ತನ್ನ ಕಾನೂನು ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ. ಹಿಂದೆ ರಾಜಮಹಾರಾಜರು ಮತ್ತು ಪಾಳೇಗಾರರ ಕಾಲದಲ್ಲಿ ಮಹಿಳೆಯರು ಓಡಾಡುವುದೇ ಕಷ್ಟವಾಗಿತ್ತು. ಮಹಿಳೆಯರನ್ನು ಕಾಪಾಡುವುದೇ ಪುರುಷರ ಕೆಲಸವಾಗಿತ್ತು. ಅಂಥ ಪರಿಸ್ಥಿತಿ ಮತ್ತೆ ಬರಬಾರದು. ಸ್ವಾತಂತ್ರ್ಯದ ನಿಜವಾದ ಅರ್ಥ ಎಂದರೆ ಮಧ್ಯ ರಾತ್ರಿ ಒಂಟಿ ಮಹಿಳೆ ನಿರ್ಭಯವಾಗಿ ನಡೆದುಕೊಂಡು ಹೋಗುವಂತಿರಬೇಕೆಂದು ಮಹಾತ್ಮ ಗಾಂಧಿ ಬಯಸಿದ್ದರು. ತದ್ವಿರುದ್ಧವಾಗಿ ಮಹಿಳೆಯರು ತಮ್ಮ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರೆ ಅದನ್ನೇ ದಮನ ಮಾಡಲು ಯತ್ನಿಸುತ್ತಿರುವುದು ನಿಜಕ್ಕೂ ತಲೆತಗ್ಗಿಸುವ ವಿಚಾರ.ಒಬ್ಬ ಬಿಜೆಪಿ ಸಂಸದನ ಮೇಲೆ ಆರೋಪ ಬಂದಿದೆ ಎಂಬ ಕಾರಣಕ್ಕೆ ಇಡೀ ಸರ್ಕಾರ ಆತನ ಪರವಾಗಿ ನಿಲ್ಲುವ ಅಗತ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿ ಮುಖ್ಯವಲ್ಲ. ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ ಸಿಗಬೇಕು. ಬ್ರಿಜ್ ಭೂಷಣ್ ಶರಣ್ ಸಿಂಗ್ ತಪ್ಪಿತಸ್ಥರಲ್ಲ ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕು. ಸರ್ಕಾರವಲ್ಲ. ನಿಷ್ಪಕ್ಷಪಾತ ತನಿಖೆ ನಡೆಸುವುದಕ್ಕೆ ಸರ್ಕಾರ ಅಡ್ಡಿಯಾಗಬಾರದು. ನಮ್ಮ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆ ಪಾರದರ್ಶಕವಾಗಿದೆ. ಅದು ಸಮರ್ಪಕವಾಗಿ ಕೆಲಸ ಮಾಡುವುದಕ್ಕೆ ಅಧಿಕಾರದಲ್ಲಿರುವವರು ಅವಕಾಶ ಮಾಡಿಕೊಡಬೇಕು. ನಮ್ಮಲ್ಲಿ ಭಾರತೀಯ ದಂಡ ಸಂಹಿತೆ ಎಲ್ಲರಿಗೂ ಅನ್ವಯವಾಗುತ್ತದೆ. ರಾಷ್ಟçಪತಿ ತಪ್ಪು ಮಾಡಿದರೂ ಕಾನೂನಿಗೆ ತಲೆಬಾಗಲೇಬೇಕು. ಇದು ಹಿಂದಿನಿಂದ ಅನುಸರಿಸಿಕೊಂಡು ಬಂದಿರುವ ಪದ್ಧತಿ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಮಹಾತ್ಮ ಗಾಂಧಿಯನ್ನು ಜೇಲಿಗೆ ಹಾಕುವ ಮುನ್ನ ನ್ಯಾಯಾಲಯದಲ್ಲಿ ಬ್ರಿಟಿಷರು ಮುಕ್ತ ವಿಚಾರಣೆ ನಡೆಸಿದ್ದರು ಎಂಬುದನ್ನು ಮರೆಯಬಾರದು. ಬ್ರಿಟಿಷರ ಕೈಯಲ್ಲಿ ಸಂಪೂರ್ಣ ಅಧಿಕಾರವಿತ್ತು. ಆದರೆ ಅವರು ನ್ಯಾಯಾಂಗ ಪ್ರಕ್ರಿಯೆಯನ್ನು ಎಂದೂ ಕೈಬಿಟ್ಟಿರಲಿಲ್ಲ. ಸ್ವಾತಂತ್ರ್ಯ ಬಂದ ಮೇಲೆ ನಮ್ಮ ಸಂವಿಧಾನ ರಚನೆಕಾರರು ಪ್ರತಿಯೊಬ್ಬ ನಾಗರಿಕನಿಗೂ ಮೂಲಭೂತ ಹಕ್ಕಿರಬೇಕೆಂದು ಬಯಸಿ, ಅದರಂತೆ ಕಾನೂನು ರಚಿಸಿದರು. ಆ ಕಾನೂನು ಪಾಲನೆಗೆ ಈಗ ಆಡಳಿತ ನಡೆಸುವವರು ಹಿಂಜರಿಯುತ್ತಿರುವುದು ನಿಜಕ್ಕೂ ತಲೆತಗ್ಗಿಸಬೇಕಾದ ವಿಚಾರ. ಜನ ಎಂದೂ ಇದನ್ನು ಸಹಿಸುವುದಿಲ್ಲ. ಪಾಕ್‌ನಲ್ಲಿ ಬೇಹುಗಾರಿಕೆ ಆರೋಪದ ಮೇಲೆ ಕುಲಭೂಷಣ್ ಬಂಧನಕ್ಕೆ ಒಳಗಾದಾಗ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ನಾವು ಈಗ ನಮ್ಮ ಮಹಿಳೆಯರಿಗೆ ನ್ಯಾಯ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂಬುದು ನಿಜಕ್ಕೂ ದುರ್ದೈವ. ಇಂಥ ಘಟನೆ ಮತ್ತೆ ಸಂಭವಿಸಬಾರದು. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಮಹಿಳಾ ಕುಸ್ತಿ ಪಟುಗಳಿಗೆ ನ್ಯಾಯ ಒದಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಆ ಮಹಿಳೆಯರ ಕ್ಷಮೆ ಕೋರಬೇಕು. ಅವರಿಗಾದ ದೈಹಿಕ ಮತ್ತು ಮಾನಸಿಕ ನೋವಿಗೆ ಕ್ಷಮೆ ಕೋರಬೇಕು. ಇದು ನಾಗರಿಕ ಸಮಾಜ ಮಾಡಬೇಕಾದ ಕೆಲಸ. ಬೇರೆ ದೇಶದಲ್ಲಿ ಇದೇ ಕೃತ್ಯ ನಡೆದಿದ್ದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಎಂದು ನಾವೇ ಟೀಕಿಸುತ್ತಿದ್ದೆವು. ಈಗ ನಾವೇ ತಪ್ಪು ಮಾಡಿ ಮೌನವಹಿಸುವುದು ಸರಿಯಲ್ಲ. ಏನೇ ಆಗಲಿ ಪ್ರಜಾಪ್ರಭುತ್ವದಲ್ಲಿ ನಮ್ಮ ತಪ್ಪುಗಳನ್ನು ನಾವೇ ಸರಿಪಡಿಸಿಕೊಳ್ಳಲು ಎಲ್ಲ ಅವಕಾಶಗಳಿರುತ್ತವೆ. ಈಗಲೂ ಕಾಲ ಮಿಂಚಿಲ್ಲ. ನಡೆದು ಹೋದ ಕಹಿ ಘಟನೆಗಳನ್ನು ಮರೆತು ದೇಶದ ಘನತೆ ಮತ್ತು ಗೌರವಕ್ಕೆ ಧಕ್ಕೆ ಬರುವುದನ್ನು ತಪ್ಪಿಸಬೇಕು. ಇದರಲ್ಲಿ ಒಣಪ್ರತಿಷ್ಠೆ ಬೇಡ. ಆಗಿ ಹೋದ ತಪ್ಪುಗಳನ್ನು ಸರಿಪಡಿಸಿಕೊಂಡು ಮಹಿಳಾ ಕ್ರೀಡಾಪಟುಗಳಲ್ಲಿ ಕುಸಿದಿರುವ ಮನೋಸ್ಥೈರ್ಯವನ್ನು ಮತ್ತೆ ತುಂಬುವ ಕೆಲಸ ನಡೆಯಬೇಕು. ಮಹಿಳಾ ಕ್ರೀಡಾಪಟುಗಳಲ್ಲಿ ಹತಾಶೆಯ ಮನೋಭಾವ ಮೂಡಬಾರದು. ಇಡೀ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮ ವಿರುದ್ಧ ಇದೆ ಎಂಬ ಭಾವನೆ ಅವರಲ್ಲಿ ಮೂಡಬಾರದು. ಮಹಿಳೆಯರು ಎಲ್ಲ ರಂಗಗಳಲ್ಲಿ ಮುಂದೆ ಬರಬೇಕೆಂದು ಬಯಸುತ್ತಿದ್ದೇವೆ. ಕ್ರೀಡಾರಂಗದಲ್ಲಿ ಈ ರೀತಿ ಶೋಷಣೆ ನಡೆದಲ್ಲಿ ತಂದೆತಾಯಿಗಳು ಯಾರೂ ತಮ್ಮ ಮಕ್ಕಳನ್ನು ಕ್ರೀಡಾರಂಗಕ್ಕೆ ಕಳುಹಿಸಲು ಬಯಸುವುದಿಲ್ಲ. ಮಹಿಳೆಯರ ಸ್ವಾತಂತ್ರ್ಯ ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯ. ಇಲ್ಲದಿದ್ದಲ್ಲಿ ಇದು ಪಾಶವೀ ಸಮಾಜ ಎಂದು ಕರೆಯದೇ ವಿಧಿಯಿಲ್ಲ.