ಪಣಜಿ: ಮಹದಾಯಿ ನದಿಯಿಂದ ಅಕ್ರಮ ನೀರು ತಿರುಗಿಸುವುದನ್ನು ತಡೆಯಲು ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರ ರಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ರಾಜ್ಯ ಸಚಿವ ಸಂಪುಟ ಸೋಮವಾರ ನಿರ್ಧರಿಸಿದೆ.
ಕರ್ನಾಟಕದ ಕಳಸಾ-ಬಂಡೂರಿ ಯೋಜನಾ ವರದಿಗೆ ನೀಡಲಾದ ಎನ್‌ಒಸಿಯನ್ನು ತಕ್ಷಣವೇ ಹಿಂಪಡೆಯಲು ಕೇಂದ್ರಕ್ಕೆ ಪತ್ರ ಬರೆಯಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದಲ್ಲಿ ಸೋಮವಾರ ಪಣಜಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಮಹದಾಯಿ ಸಮಸ್ಯೆ ಕುರಿತು ಚರ್ಚಿಸಲಾಯಿತು. ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ, ಮಹದಾಯಿ ವಿಚಾರ ಸರ್ಕಾರ ಯಾವತ್ತೂ ಕೈ ಬಿಟ್ಟಿಲ್ಲ. ಗೋವಾಕ್ಕೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಲು ಎಲ್ಲಾ ಶಾಸಕಾಂಗ ಪಕ್ಷದ ನಿಯೋಗ ಪಿಎಂ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಜಲಶಕ್ತಿ ಸಚಿವರನ್ನು ಭೇಟಿಮಾಡಲಿದೆ. ಮಹದಾಯಿ ನದಿ ವಿಚಾರದಲ್ಲಿ ಕೇಂದ್ರದ ಜತೆ ಹೋರಾಟ ಮುಂದುವರಿಯಲಿದೆ.