ಮಹದಾಯಿ: ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ

Advertisement

ಹುಬ್ಬಳ್ಳಿ: ಮಹದಾಯಿ, ಅಪ್ಪರ್ ಭದ್ರಾ ಹಾಗೂ ಮೇಕೇದಾಟು ಯೋಜನೆಗಳ ವಿಚಾರವಾಗಿ ಕೇಂದ್ರ ಸರ್ಕಾರ, ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಮಹಾದಾಯಿ ಯೋಜನೆಗೆ ಹಸಿರು ನ್ಯಾಯಾಧಿಕರಣ ಮತ್ತು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿವೆ. ಆದರೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪರಿಸರ ಇಲಾಖೆಯ ಅನುಮತಿ ಇನ್ನೂ ದೊರೆತಿಲ್ಲ. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಕೇವಲ ಎರಡು ದಿನದಲ್ಲಿ ಪರವಾನಗಿ ನೀಡಬಹುದು. ಆದರೂ ಕೇಂದ್ರ ಮನಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿದರು.
ಅಪ್ಪರ್ ಭದ್ರಾ ಯೋಜನೆಗೆ ೫ ಸಾವಿರ ಕೋಟಿ ಅನುದಾನ ನೀಡುವುದಾಗಿ ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ಕೇಂದ್ರ ಸರ್ಕಾರ ಈವರೆಗೂ ೫ ಪೈಸೆ ಅನುದಾನ ನೀಡಿಲ್ಲ. ಮೇಕೆದಾಟು ಯೋಜನೆಯ ವಿಚಾರವಾಗಿ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ತಮಿಳುನಾಡಿನ ವಾದವನ್ನು ತಿರಸ್ಕರಿಸಿರುವ ನ್ಯಾಯಾಲಯ ನಿರ್ಧಾರದ ವಿವೇಚನೆಯನ್ನು ಕೇಂದ್ರದ ಮೇಲೆ ಬಿಟ್ಟಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆ ಎಂದರು.
ಕೇಂದ್ರದಿಂದ ಈವರೆಗೂ ಪರಿಹಾರ ಬಂದಿಲ್ಲ
ಇನ್ನು ಬರ ಪರಿಹಾರ ವಿಚಾರವಾಗಿ ೨೦೨೩ರ ಸೆ. ೨೩ಕ್ಕೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದ್ದು, ೧೮,೧೭೨ ಕೋಟಿ ರೂ. ಬರ ಪರಿಹಾರ ನೀಡುವಂತೆ ಕೋರಲಾಗಿದೆ. ಈ ಪೈಕಿ ೪,೬೬೩ ಕೋಟಿ ರೂ. ರೈತರಿಗೆ ಸೇರಬೇಕಾದ ಹಣ. ಈವರೆಗೂ ಪರಿಹಾರ ನೀಡದಿರುವುದು ಕರ್ನಾಟಕದ ಮೇಲಿನ ಅಸಡ್ಡೆ ತೋರುತ್ತದೆ ಎಂದು ಕಿಡಿಕಾರಿದರು.