ಹೊಸಪೇಟೆ: ರಾಜ್ಯದಲ್ಲಿ ಹಿಂದೆಂದಿಗಿಂತ ಹೆಚ್ಚಿನ ಮಳೆಯಾಗುತ್ತಿದ್ದು, ಜಿಲ್ಲಾಧಿಕಾರಿಗಳು ಕಟ್ಟೆಚ್ಚರಿಕೆ ವಹಿಸಬೇಕು. ಮಳೆಹಾನಿ ಸಂಭವಿಸಿದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಹಾರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ದೇಶನ ನೀಡಿದರು.
ಹೊಸಪೇಟೆಯಿಂದ ಮಳೆಹಾನಿ ಸಂಭವಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಪರಿಹಾರ ಕ್ರಮಗಳ ಪರಿಶೀಲನೆ ನಡೆಸಿದ ಅವರು, ಮನೆಗಳಿಗೆ ಸಂಬಂಧಿಸಿದ ಹಾನಿಯನ್ನು ದಾಖಲಿಸುವ ಹಂತದಲ್ಲಿಯೇ ಕೆಲವೆಡೆ ಲೋಪಗಳಾಗುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಲೋಪವಾಗದಂತೆ ಜಿಲ್ಲಾಧಿಕಾರಿಗಳು ಖುದ್ದು ಮೇಲ್ವಿಚಾರಣೆ ವಹಿಸಬೇಕು. ವಸ್ತುಸ್ಥಿತಿ ಆಧರಿಸಿ, ಪರಿಹಾರ ಕೋರಿ ಬಂದ ಮನವಿಗಳನ್ನು ದಾಖಲಿಸಬೇಕು. ಕರ್ತವ್ಯ ಲೋಪ ಎಸಗಿದ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಮನೆ ಹಾನಿಗೆ ಸಂಬಂಧಿಸಿದಂತೆ ಎನ್ಡಿಆರ್ಫ್ ಮಾರ್ಗಸೂಚಿಗಿಂತ ಹೆಚ್ಚುವರಿ ಪರಿಹಾರ ವಿತರಣೆಗೆ ಸುತ್ತೋಲೆ ಹೊರಡಿಸುವಂತೆ ವಿಪತ್ತು ನಿರ್ವಹಣೆ ಆಯುಕ್ತರಿಗೆ ಸೂಚನೆ ನೀಡಿದರು.
ಮಳೆಹಾನಿಯಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ, ಪರಿಹಾರ ವಿತರಣೆ, ಮಾಹಿತಿ ದಾಖಲಿಸುವಲ್ಲಿ ಲೋಪಗಳಾಗದಂತೆ ತಹಸೀಲ್ದಾರರಿಗೆ ಮಾರ್ಗಸೂಚಿ ನೀಡಬೇಕು. ಬೆಳೆಹಾನಿ ಪರಿಹಾರ ವಿತರಣೆಯನ್ನೂ ತ್ವರಿತವಾಗಿ ವಿತರಿಸಬೇಕು. ಅಕ್ಟೋಬರ್ ತಿಂಗಳಿನಲ್ಲಿ ಸಂಭವಿಸಿದ ಬೆಳೆಹಾನಿಯನ್ನು ಸಹ ಕೂಡಲೇ ಜಂಟಿ ಸಮೀಕ್ಷೆ ನಡೆಸಿ, ಈ ತಿಂಗಳೊಳಗೆ ಪರಿಹಾರ ವಿತರಿಸಲು ಸೂಚನೆ ನೀಡಲಾಯಿತು.
Home ನಮ್ಮ ಜಿಲ್ಲೆ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ; ಪರಿಹಾರ ವಿತರಣೆಯಲ್ಲಿ ಲೋಪ ಸಲ್ಲದು: ಸಿಎಂ ಕಟ್ಟುನಿಟ್ಟಿನ ಸೂಚನೆ