ಮಂಡ್ಯ: ಜಿಲ್ಲಾ ಹಾಲು ಒಕ್ಕೂಟದಿಂದ ನಂದಿನಿ ಪನ್ನೀರ್ ನಿಪ್ಪಟ್ಟು ಹಾಗೂ ನಂದಿನಿ ಸ್ಪೆಷಲ್ ಹಾಲಿನ ಬರ್ಫಿ ಎಂಬ ಎರಡು ನೂತನ ಉತ್ಪನ್ನಗಳನ್ನು ಇಂದು ಮನ್ ಮುಲ್ ನ ಡಾ. ವರ್ಗೀಸ್ ಕೂರಿಯನ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷರಾದ ಬಿ.ಬೋರೇಗೌಡ ಮತ್ತು ಆಡಳಿತ ಮಂಡಳಿಯ ನಿರ್ದೇಶಕರುಗಳಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ನೂತನ ಪ್ರಾಡಕ್ಟ್ ಬಿಡುಗಡೆ ಮಾಡಿ ಮಾತನಾಡಿದ ಮನ್ಮುಲ್ ಅಧ್ಯಕ್ಷ ಬೋರೇಗೌಡ ಅವರು ಮಂಡ್ಯ ಹಾಲು ಒಕ್ಕೂಟದಿಂದ ಹೊಸ ಉತ್ಪನ್ನ ಮಾರುಕಟ್ಟೆಗೆ ಬರುತ್ತಿದೆ. ಈಗಾಗಲೇ ನಂದಿನಿ ತುಪ್ಪ ಸಾಕಷ್ಟು ಪ್ರಮಾಣದಲ್ಲಿ ಖರೀದಿಯಾಗುತ್ತಿವೆ. ಇದು ಕೂಡ ಹಾಗೇಯೆ ಖರೀದಿಯಾಗಿ ಜನಮನ್ನಣೆ ಗಳಿಸಲಿದೆ ಎಂಬ ವಿಶ್ವಾಸವಿದೆ ಎಂದರು. ಮನ್ ಮುಲ್ ನಿಂದ ಇನ್ನು ಹೊಸ ಹೊಸ ರೀತಿಯಲ್ಲಿ ಉತ್ಪನ್ನ ಕೊಡುತ್ತೇವೆ. ಹೊಸ ಉತ್ಪನ್ನ ತಯಾರಿಕೆಯಿಂದ ಮನ್ ಮುಲ್ ಗೆ ಮತ್ತಷ್ಟು ಆದಾಯ ಬರಲು ಸಾಧ್ಯವಾಗಿದೆ. ಸಾರ್ವಜನಿಕರು ಮನ್ ಮುಲ್ ಪ್ರಾಡಕ್ಟ್ ಗಳನ್ನು ಮತ್ತಷ್ಟು ಖರೀದಿಸಿ ಸಹಕರಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮನ್ ಮುಲ್ ಉಪಾಧ್ಯಕ್ಷ ರಘುನಂದನ್, ನಿರ್ದೇಶಕ ಉಮ್ಮಡಳ್ಳಿ ಶಿವಪ್ಪ, ರೂಪ, ಪುಷ್ಪಲತಾ ಸೇರಿದಂತೆ ಇನ್ನಿತರರು ಇದ್ದರು.