ಬಾಗಲಕೋಟೆ: ಗುರುವಾರ ಸಂಜೆ ಸುರಿದ ಬಾರಿ ಮಳೆಗೆ ಹೆದ್ದಾರಿ ಬದಿಯ ಚರಂಡಿಗಳಲ್ಲಿ ಮಣ್ಣು ತುಂಬಿಕೊಂಡಿದ್ದರ ಪರಿಣಾಮ ಚರಂಡಿ ನೀರು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.
ಇಷ್ಟು ದಿನ ಮುನಿಸಿಕೊಂಡಿದ್ದ ಮಳೆರಾಯ ಗುರುವಾರ ಸುರಿದಿದ್ದರಿಂದ ರೈತರಲ್ಲಿ ಮಂದಹಾಸ ಮೂಡಿದೆ. ಇತ್ತ ಹೆದ್ದಾರಿ ಪಕ್ಕದಲ್ಲಿರುವ ಚರಂಡಿಗಳಲ್ಲಿ ಮಣ್ಣು ತುಂಬಿಕೊಂಡಿದ್ದರಿಂದ ಗ್ರಾಮದ ಮನೆಗಳಿಗೆ ನೀರು ನುಗ್ಗಿ ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ರಾತ್ರಿ ಇಡೀ ಕುಟುಂಬಗಳು ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳಲ್ಲಿನ ನೀರು ತೆಗೆಯಲು ಹರಸಾಹಸ ಪಡುತ್ತಿರುವ ದೃಶ್ಯ ಕಂಡುಬಂತು.
ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು ಗ್ರಾಪಂಗೆ ಮನವಿ ಮಾಡಿಕೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ ಪರಿಣಾಮ ಮನೆಗಳಿಗೆ ನೀರು ನುಗ್ಗುತ್ತಿದೆ. ಆದಷ್ಟು ಬೇಗ ಚರಂಡಿ ಸ್ವಚ್ಛಗೊಳಿಸಿ ನೀರು ಹರಿಯುವಂತೆ ಮಾಡಿ ಜನರಿಗೆ ತೊಂದರೆಯಾಗದಂತೆ ಮಾಡಲಾಗುವುದು ಎಂದು ಪಿಡಿಓ ಎಸ್.ಜಿ. ಪರಸನ್ನವರ ಹೇಳಿದ್ದಾರೆ.