ಕಾಮನೆಗಳನ್ನೆಲ್ಲಾ ಹಿಂದಕ್ಕೆ ದೂಡಿ, ಯಾರು ನಿಷ್ಕಾಮನೆ ಭಾವವನ್ನು ಹೊಂದಿರುತ್ತಾನೋ, ಅವನು ನಿಜವಾಗಿಯೂ ತುಂಬಾ ಓದಿದವನು ಮತ್ತು ಕೇಳಿದವನು. ಅನುಷ್ಠ್ಠಾನಶೀಲನು ಆಗಿರುತ್ತಾನೆ. ಏಕೆಂದರೆ ಕಾಮವು ಅನುಭವಿಸುವುದರಿಂದ ಶಮನವಾಗುವುದಿಲ್ಲ. ಹವಿಸ್ಸಿನಿಂದ ಬೆಂಕಿಯು ಬೆಳಗುವಂತೆ ಇನ್ನೂ ಹೆಚ್ಚಾಗಿ ಬೆಳೆಯುತ್ತದೆ. ಆದ್ದರಿಂದ ಕಾಮಕ್ಕೆ ತುತ್ತಾಗಬಾರದು.
ಗುಣದಿಂದ ಪದವಿ ಹೊಂದು: ಕೆಲವರು ದುಡ್ಡಿನಿಂದ, ಶಕ್ತಿಯಿಂದ, ಜನಬೆಂಬಲದಿಂದ ಉತ್ತಮ ಪದವಿಯನ್ನು ಹೊಂದಲು ಪ್ರಯತ್ನಿಸುತ್ತಾರೆ. ಆದರೆ, ಇದು ತಪ್ಪು. ಏಕೆಂದರೆ ಸಿಂಹಕ್ಕೆ ಮೃಗಗಳು ಅಭಿಷೇಕ ಮಾಡುವುದಿಲ್ಲ. ಸಂಸ್ಕಾರ ಮಾಡುವುದಿಲ್ಲ ಅಥವಾ ಸಿಂಹವೂ ಕೂಡ ಬೇರೆ ಯಾವುದೇ ರೀತಿಯಲ್ಲಿ ತನ್ನ ಪದವಿಯನ್ನು ಪಡೆದುಕೊಂಡಿಲ್ಲ. ಕೇವಲ ತನ್ನ ಪರಾಕ್ರಮದಿಂದ ತನ್ನ ಪದವಿಯನ್ನು ಸಂಪಾದಿಸಿಕೊಂಡಿದೆ. ಮೃಗರಾಜ ಪದವಿಯು ತಾನಾಗಿಯೇ ಅದಕ್ಕೆ ಒದಗಿದೆ. ಹೀಗೆ ಬದುಕಬೇಕು ಜೀವನದಲ್ಲಿ ಎನ್ನುತ್ತದೆ ಹಿತೋಪದೇಶ.
ಸಭೆಗೆ ಹೋಗುವಾಗ ಎಚ್ಚರಿಕೆ: ಕೇವಲ ಕೀರ್ತಿ ಕಾಮುಕತನದಿಂದ ಸಭೆಯನ್ನು ಪ್ರವೇಶಿಸಬಾರದು. ಸಭೆಗೆ ಹೋದರೆ ಉಚಿತವಾದ ಮಾತುಗಳನ್ನೇ ಆಡಬೇಕು. ಸಭೆಗೆ ತೆರಳಿ ತಾನು ತಿಳಿದ ವಿಷಯವನ್ನು ಸಭಿಕರಿಗೆ ಹೇಳದಿದ್ದರೆ ಅಂಥವನು ಪಾಪಿಯಾಗುತ್ತಾನೆ ಅಥವಾ ತಾನು ತಿಳಿದಿದ್ದನ್ನು ವಿಪರೀತವಾಗಿ ತಿಳಿಸಿದರೂ ಕೂಡ ಆ ಮನುಷ್ಯನು ಪಾಪಿಯಾಗುತ್ತಾನೆ. ಆದ್ದರಿಂದ ಸಭೆಗೆ ತೆರಳುವವರು ಈ ವಿಷಯವನ್ನು ನೆನಪಿಟ್ಟುಕೊಂಡು ತೆರಳಬೇಕು. ಹೀಗೆ ಮಾಡದಿದ್ದರೆ ಸಭೆಯನ್ನು ಪ್ರವೇಶಿಸಲೇಬಾರದು ಎಂಬುವುದು ಮನುಸ್ಮೃತಿ.
ಹಿರಿಯರಿಗೆ ನಮಸ್ಕಾರ ಮಾಡು: ವೃದ್ಧರಾದ ತಂದೆ-ತಾಯಿಗಳ ಸೇವೆ ಮಾಡಬೇಕು. ಮತ್ತು ಜ್ಞಾನಿವರೇಣ್ಯರನ್ನು ಉಪಸತ್ತಿ ಮಾಡಬೇಕು. ಯಾರು ನಿತ್ಯವೂ ಹಿರಿಯರಿಗೆ ಅಭಿವಾದನೆ ಮಾಡಿ, ಅವರ ಸೇವೆಯನ್ನು ಮಾಡುತ್ತಾರೋ, ಅವರಿಗೆ ಕೀರ್ತಿ, ಆಯುಷ್ಯ, ಒಳ್ಳೆಯ ಹೆಸರು ಮತ್ತು ಬಲ ಈ ನಾಲ್ಕು ಅಭಿವೃದ್ಧಿ ಹೊಂದುತ್ತಾನೆ.