ಭಾರತದ ರಾಷ್ಟ್ರಪತಿ ತಮ್ಮ ಚೊಚ್ಚಲ ಭಾಷಣದಲ್ಲಿ ಕುವೆಂಪು ಅವರ ನಾನು ಅಳಿವೆ ನೀನು ಅಳಿವೆ, ನಮ್ಮ ಎಲುಬುಗಳ ಮೇಲೆ ಮೂಡುವುದು ನವಭಾರತದ ಲೀಲೆ' ಎಂದ ಮಾತುಗಳನ್ನು ಉಲ್ಲೇಖಿಸಿ ಕರ್ನಾಟಕಕ್ಕೆ ಹಿರಿಮೆಯನ್ನು ತಂದು ಕೊಟ್ಟಿದ್ದಾರೆ. ಕುವೆಂಪು ನಿಸರ್ಗ ಕವಿಯೂ ಹೌದು, ಕ್ರಾಂತಿಕಾರಿ ಕವಿಯೂ ಹೌದು. ದೇಶಕ್ಕೆ ಸ್ವಾತಂತ್ರ‍್ಯ ಬಂದ ಕೂಡಲೇ ಅವರು
ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಎಂದು ಹಾಡುವುದರ ಮೂಲಕ ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಯನ್ನು ಎತ್ತಿ ಹಿಡಿದರು. ಅದರಂತೆ ನಾವು ನಡೆದುಕೊಂಡು ಬಂದಿದ್ದೇವೆ. ನಾವೆಲ್ಲ ಭಾರತ ಮಾತೆಯ ತನುಜಾತೆಯ ಮಕ್ಕಳು. ರಣರಂಗದಲ್ಲಿ ಹೇಡಿಗಳಾಗುವುದು ಬೇಡ. ನಾವೆಲ್ಲಾ ಅಳಿಯುವುದು ನಿಶ್ಚಿತ. ನಮ್ಮ ಎಲುಬುಗಳ ಮೇಲೆ ನವ ಭಾರತ ನಿರ್ಮಾಣವಾಗಲಿದೆ ಎಂಬ ಮಾತುಗಳು ಇಂದಿನ ಸಂದರ್ಭಕ್ಕೆ ಅರ್ಥಪೂರ್ಣವಾಗಿದೆ. ಕುವೆಂಪು ಎಂದೂ ಧರ್ಮದ ಜಂಜಾಟದಿಂದ ದೂರ ಉಳಿದವರು.ಎಲ್ಲರಿಗೂ ಸಮಬಾಳು-ಸಮಪಾಲು ಸಿಗಬೇಕೆಂದು ಬಯಸಿದವರು. ಹೀಗಾಗಿ ಅವರ ಮಾತುಗಳು ಇಂದಿಗೂ ಅರ್ಥಪೂರ್ಣ. ಮಲೆನಾಡಿನಲ್ಲಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತ ಬೆಳೆದ ಅವರು ಮೈಸೂರಿಗೆ ಬಂದ ಮೇಲೆ ವಿಶ್ವಪ್ರಜ್ಞೆಯನ್ನು ಬೆಳೆಸಿಕೊಂಡರು. ಅವರ ಮಾತುಗಳು ಇಂದು ಅರ್ಥಪೂರ್ಣವಾಗಿ ಕಾಣುತ್ತಿದೆ. ಭಾರತ ಮುಂದಿನ ೨೫ ವರ್ಷಗಳಲ್ಲಿ ವಿಶ್ವದ ಪ್ರಮುಖ ದೇಶವಾಗಿ ರೂಪುಗೊಳ್ಳಬೇಕು. ಅದಕ್ಕೆ ಈಗಿನಿಂದಲೇ ಪಣ ತೊಡಬೇಕು. ಈ ಹೋರಾಟದಲ್ಲಿ ಧರ್ಮದ ಸಂಕೋಲೆಗಳು ಇರಬಾರದು. ಭರತಖಂಡದ ಮತವೇ ನನ್ನ ಮತ ಎಂಬ ಮನೋಭಾವ ಇಂದಿನ ಅಗತ್ಯ. ಇಡೀ ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಅದಕ್ಕಾಗಿ ಎಲ್ಲ ತ್ಯಾಗಕ್ಕೂ ಸಿದ್ಧರಾಗಬೇಕು. ಈಗ ಯುವ ಪೀಳಿಗೆ ನಿಜವಾಗಿ ವಿಶ್ವಪ್ರಜೆಯಾಗಿ ರೂಪುಗೊಳ್ಳುತ್ತಿದ್ದಾರೆ. ಅದರಲ್ಲೂ ಅಂತರ್ಜಾಲ ಇಡೀ ಮಾನವ ಜನಾಂಗವನ್ನು ಒಂದುಗೂಡಿಸುತ್ತಿದೆ. ಇಡೀ ವಿಶ್ವಕ್ಕೆ ಅನ್ವಯಿಸುವ ಜೀವನ ಕ್ರಮ ರೂಪುಗೊಳ್ಳುತ್ತಿದೆ. ಈ ರೀತಿ ಹೊಸ ಜೀವನಧರ್ಮ ಬರುವ ಕಾಲದಲ್ಲಿ ಸಂಘರ್ಷ ಏರ್ಪಡುವುದು ಸಹಜ. ಇದುವರೆಗೆ ನಾವು ಅನುಸರಿಸಿಕೊಂಡು ಬಂದ ಜೀವನ ಧರ್ಮ ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಮನುಕುಲದ ಒಳಿತಿಗಾಗಿ ಹೊಸ ಜೀವನಧರ್ಮವನ್ನು ಕಂಡುಕೊಳ್ಳಬೇಕು. ಹೀಗಾಗಿ ಇದು ರಣರಂಗ. ಇಲ್ಲಿ ಎಲ್ಲರೂ ಹೋರಾಟಗಾರರೇ. ಯಾರೂ ಹೇಡಿಗಳಲ್ಲ. ಭಾರತಾಂಬೆಯ ನೆತ್ತರು ಹರಿಯುವುದನ್ನು ತಪ್ಪಿಸಲು ನಾವೆಲ್ಲ ನಮ್ಮ ಜೀವ ತ್ಯಾಗಕ್ಕೆ ಸಿದ್ಧರಾಗಬೇಕು. ಕುವೆಂಪು ಕಾವ್ಯದಲ್ಲಿ ಹೇಡಿತನ ಎಂಬುದು ಲವಲೇಶವೂ ಇಲ್ಲ. ಅವರು ಗುರುವನ್ನು ಬೇಡುವುದು ಕೂಡ ನನ್ನಲ್ಲಿ ಶಕ್ತಿ ತುಂಬಿ ರಣರಂಗಕ್ಕೆ ಕಳುಹಿಸಿಕೊಡು ಎಂಬ ಆರ್ತನಾದ ಇದೆಯೇ ಇಡೀ ಲೋಕಕ್ಕೆ ಬೆನ್ನು ತೋರಿಸಿ ಬರುವ ಮನೋಭಾವ ಇಲ್ಲ. ಕುವೆಂಪು ಅವರ ಮಾತುಗಳನ್ನು ರಾಷ್ಟ್ರಪತಿ ಉಲ್ಲೇಖಿಸಿ ನವಭಾರತದ ನಿರ್ಮಾಣದಲ್ಲಿ ನಾವು ಹೋರಾಡಬೇಕು ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. ಅವರು ಮಾತುಗಳು ಕ್ರಾಂತಿಕಾರಿಯೂ ಹೌದು, ಅಭಿವೃದ್ಧಿಪರವೂ ಹೌದು. ಭಾರತ ಅಭಿವೃದ್ಧಿಶೀಲ ಎಂಬ ಮಾತು ಮುಗಿಯಿತು. ಈಗ ಅಭಿವೃದ್ಧಿ ಹೊಂದಿದ ದೇಶದ ಸಾಲಿಗೆ ಸೇರುತ್ತಿದೆ. ಅದರಿಂದ ದೊಡ್ಡಣ್ಣ ಬೈಡನ್ ಕೂಡ ಭಾರತ- ಅಮೆರಿಕ ಸ್ನೇಹಕ್ಕೆ ಎಂದು ಚ್ಯುತಿ ಇಲ್ಲ ಎಂದು ಹೇಳಿದ್ದಾರೆ. ರಷ್ಯಾ- ಉಕ್ರೇನ್ ಯುದ್ಧದ ಕಾಲದಲ್ಲಿ ಭಾರತ ತೆಗೆದುಕೊಂಡ ನಿಲುವನ್ನು ಪಾಕ್ ಕೂಡ ಸ್ವಾಗತಿಸಿದೆ. ಮುಂಬರುವ ದಿನಗಳಲ್ಲಿ ಭಾರತ ಜಗತ್ತಿನ ಆಗುಹೋಗುಗಳಲ್ಲಿ ಪ್ರಮುಖ ಪಾತ್ರವಹಿಸುವುದಂತೂ ಖಚಿತ. ಅದಕ್ಕೆ ಮುನ್ನ ಹಸಿವು ಮುಕ್ತ ಭಾರತ ಮಾಡಬೇಕು. ಎಲ್ಲರ ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು. ಉಳಿದದ್ದು ತಂತಾನೇ ಬರುತ್ತದೆ. ಭಾರತ ಮೊದಲಿನಿಂದಲೂ ಸರ್ವ ಧರ್ಮ ಮತ್ತು ಸಂಸ್ಕೃತಿಗಳ ಸಂಗಮ. ಇಲ್ಲಿ ನೂರಾರು ಭಾಷೆ, ಜೀವನಕ್ರಮ, ಚಿಂತನೆಗಳು ಸಂಘರ್ಷವಿಲ್ಲದೆ ಉಳಿದುಕೊಂಡು ಬಂದಿದೆ. ಈ ವೈವಿಧ್ಯತೆಯೇ ನಮ್ಮ ಜೀವಾಳ. ಇದನ್ನು ಉಳಿಸಿಕೊಳ್ಳುವುದರಲ್ಲೇ ಪ್ರಜಾಪ್ರಭುತ್ವದ ಮೂಲಬೇರುಗಳನ್ನು ಕಾಪಾಡಬೇಕಿದೆ. ಜಾತ್ಯತೀತ ಮತ್ತು ಸಮಾಜವಾದ ಎರಡೂ ಒಟ್ಟಿಗೆ ಸಾಗಬೇಕು. ಕಟ್ಟಕಡೆಯ ಮನುಷ್ಯನಿಗೆ ಮೊಟ್ಟ ಮೊದಲು ಅವಕಾಶ ಮಾಡಿಕೊಡುವುದೇ ತಮ್ಮ ಸಂಸ್ಕೃತಿಯ ಲಕ್ಷಣ. ಇದರಲ್ಲೇ ಪ್ರಜಾಪ್ರಭುತ್ವ ಉಳಿದಿದೆ. ಆರ್ಥಿಕ- ಸಾಮಾಜಿಕ ಕ್ರಾಂತಿ ಇಲ್ಲಿ ಶಾಂತಿಯುತವಾಗಿ ಎಲ್ಲರ ಅಭಿಮತದಂತೆ ನಡೆಯುತ್ತದೆ. ಇದು ಶಾಂತಿಯ ಕ್ರಾಂತಿ. ಇಲ್ಲಿ ಸೋಲು-ಗೆಲುವು ಎಂಬುದು ಇಲ್ಲ. ಸೋತವರು ತಮ್ಮ ತಪ್ಪು ತಿದ್ದುಕೊಳ್ಳುತ್ತಾರೆ. ಗೆವರು ಅಹಂಕಾರದಿಂದ ಬೀಗುವುದಿಲ್ಲ. ಇಡೀ ವ್ಯವಸ್ಥೆ ಪ್ರಬುದ್ಧವಾಗಬೇಕು ಎಂದು ಬಯಸುವುದೇ ಭಾರತೀಯತೆಯ ಸಂದೇಶ. ನಾವು ಶಾಂತಿಮಂತ್ರ ಜಪಿಸಿದರೂ ನಮ್ಮ ಗಡಿ ರಕ್ಷಣೆಯ ವಿಚಾರ ಬಂದಾಗ ಯಾವ ದಾಕ್ಷಿಣ್ಯವನ್ನೂ ತೋರಿಲ್ಲ. ಯುದ್ಧದಲ್ಲಿ ಸೋದರ ಮಾವನೇ ಎಂಬ ಮಾತಿನಂತೆ ವರ್ತಿಸುವುದು ಅಗತ್ಯ. ಅದಕ್ಕೆ ನಮ್ಮ ಸೇನೆಯನ್ನು ಸದೃಢಗೊಳಿಸುವ ಕೆಲಸ ನಡೆಯುತ್ತಿದೆ. ಸೇನೆಗೆ ಬೇಕಾದ ಯುದ್ಧೋಪಕರಣಗಳನ್ನು ಪಡೆಯುವ ಕೆಲಸ ನಡೆಯುತ್ತಿದೆ. ಅಲ್ಲದೆ ಆತ್ಮ ನಿರ್ಭರ ಭಾರತ್ ಯೋಜನೆ ಮೂಲಕ ಸ್ವಾವಲಂಬಿ ಜೀವನ ಆರಂಭಿಸುವುದು ಅಗತ್ಯ. ಇದರಲ್ಲಿ ಯುವ ಪೀಳಿಗೆಯ ಪಾತ್ರ ದೊಡ್ಡದು. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಮತ್ತು ಸಂಶೋಧನೆಗೆ ಮಹತ್ವ ನೀಡುವುದು ಅಗತ್ಯ. ಹೊಸ ಹೊಸ ಚಿಂತನೆಗಳು ನಡೆಯಬೇಕು. ಅದಕ್ಕೆ ಉತ್ತೇಜನ ನೀಡುವ ಕೆಲಸವನ್ನು ಉನ್ನತ ಅಧ್ಯಯನ ಸಂಸ್ಥೆಗಳು ಕೈಗೊಳ್ಳಬೇಕು. ಐಟಿಬಿಟಿ ಸಂಸ್ಥೆಗಳು ಭಾರತೀಯ ವಿಜ್ಞಾನ ಮಂದಿರ ಸೇರಿದಂತೆ ಎಲ್ಲ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಕೈಜೋಡಿಸಬೇಕು. ಖಾಸಗಿ ರಂಗದಲ್ಲಿ ಹೆಚ್ಚು ಸಂಶೋಧನೆಗಳು ನಡೆದಲ್ಲಿ ಅದಕ್ಕೆ ವಿಶ್ವ ಮನ್ನಣೆ ಸುಲಭವಾಗಿ ಸಿಗಲಿದೆ. ಸ್ವಾತಂತ್ರ‍್ಯ ದಿನಾಚರಣೆ ಸಂದರ್ಭದಲ್ಲಿ ಹೊಸ ಜೀವನ ಕ್ರಮಕ್ಕೆ ಪಃಣ ತೊಡಬೇಕಾದ ಕಾಲ ಬಂದಿದೆ. ವಿಜ್ಞಾನ- ತಂತ್ರಜ್ಞಾನ- ಸಂಶೋಧನೆ ಒಟ್ಟಿಗೆ ಸಾಗಬೇಕಾದ ಕಾಲ ಬಂದಿದೆ. ಕೊರೊನಾ ಸೋಂಕನ್ನು ನಾವು ಎದುರಿಸಿದ ರೀತಿ ನಮ್ಮಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿದೆ.