ಬಳ್ಳಾರಿ: ಗಡಗಿ ಚೆನ್ನಪ್ಪ ವೃತ್ತದ ಗಡಿಯಾರ ಕಂಬವನ್ನು ರಾತ್ರೋರಾತ್ರಿ ಉರುಳಿಸಿದ್ದನ್ನ ಖಂಡಿಸಿ ಜಿಲ್ಲಾ ಕಾಂಗ್ರೆಸ್ ನಿಂದ ರಾತ್ರಿ ಇಡೀ ಧರಣಿ ಹಮ್ಮಿಕೊಳ್ಳಲಾಯಿತು.
ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹೊಸ ಗಡಿಯಾರ ಕಂಬ ನಿರ್ಮಾಣ ಕುರಿತು ಸಾರ್ವಜನಿಕರು, ವ್ಯಾಪಾರಿಗಳು, ಸಂಘ ಸಂಸ್ಥೆ ಮುಖಂಡರ ಜೊತೆ ಸಭೆ ನಡೆಸಿದ್ದು, ರಾತ್ರಿ 11.30ರ ಸುಮಾರಿಗೆ ಜೆಸಿಬಿ ಬಳಸಿ ಗಡಿಯಾರ ಕಂಬ ನೆಲಸಮ ಮಾಡಿದ್ದಾರೆ. ಮಧ್ಯರಾತ್ರಿ ವಿಷಯ ತಿಳಿದ ಪಾಲಿಕೆಯ ವಿಪಕ್ಷ ನಾಯಕ ಪಿ.ಎನ್. ಗಾದೆಪ್ಪ ನೇತೃತ್ವದಲ್ಲಿ ಧರಣಿ ನಡೆಸಿದರು.
ಈ ಹಿಂದೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಯಾವುದೇ ಕಾರಣಕ್ಕೂ ಗಡಿಯಾರ ಕಂಬದ ಪುನರ್ ನಿರ್ಮಾಣ ಈಗ ಬೇಡ. ಈ ಹಿಂದೆ ಇದ್ದ ಗಡಿಯಾರ ಕಂಬವನ್ನು ಸಹ ಇದೇ ರೀತಿ ಏಕಾಏಕಿ ಉರುಳಿಸಿದ್ದರು. ಈ ಸಂಬಂಧ ಹಾಲಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಅದರ ಇತ್ಯರ್ಥ ಆಗುವವರೆಗೂ ಈಗ ಇರುವ ಗಡಿಯಾರ ಕಂಬ ಕೆಡವಬಾರದು ಎಂದು ನಿರ್ಣಯ ಕೈಗೊಳ್ಳಲಾಗಿತ್ತು. ಆದ್ರೆ, ಈ ನಿರ್ಣಯಕ್ಕೆ ಬೆಲೆ ಕೊಡದ ಬಿಜೆಪಿ ಸರ್ಕಾರ, ಜಿಲ್ಲಾಡಳಿತ, ಮಹಾನಗರ ಪಾಲಿಕೆಯ ಅಧಿಕಾರಿ ವರ್ಗ ಇದೀಗ ಗಡಿಯಾರ ಕಂಬವನ್ನು ಕೆಡವಿದೆ. ಇದು ಸಂವಿಧಾನ ವಿರೋಧಿ ಸರ್ವಾಧಿಕಾರಿ ಧೋರಣೆ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದರು.