ಮಧ್ಯಪ್ರದೇಶದ ಬಾಲಕಿ ಮೇಲೆ ಅತ್ಯಾಚಾರ ಅತ್ಯಂತ ಹೇಯಕೃತ್ಯ.
ಚಂದ್ರಯಾನದಿಂದ ಗಳಿಸಿದ ಘನತೆ ಗೌರವ ಇಂಥ ಘಟನೆಗಳಿಂದ ಮಣ್ಣುಪಾಲಾಗುವುದು ನಿಶ್ಚಿತ.
ಮಧ್ಯಪ್ರದೇಶದಲ್ಲಿ ೧೨ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದು ಆಕೆ ತೀವ್ರ ರಕ್ತಸ್ರಾವದಿಂದ ಬೀದಿಯಲ್ಲಿ ಹೊರಳಾಡಿದರೂ ಯಾರೂ ಸಹಾಯಕ್ಕೆ ಬರಲಿಲ್ಲ ಎಂಬುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಅರೆಬೆತ್ತಲೆಯಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಬಾಲಕಿಯನ್ನು ಕೊನೆಗೆ ಇಂದೋರ್ ಆಸ್ಪತ್ರೆಗೆ ಸೇರಿಸಿದ ಮೇಲೆ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಇಂಥ ಘಟನೆಗಳು ದೇಶದ ಘನತೆಗೆ ಧಕ್ಕೆ. ಮಹಿಳೆ ಮತ್ತು ಮಕ್ಕಳು ದೌರ್ಜನ್ಯಕ್ಕೆ ಒಳಗಾಗುವುದನ್ನು ತಪ್ಪಿಸಬೇಕು ಎಂದರೆ ಮೊದಲು ಸಮಾಜ ದುಷ್ಟಶಕ್ತಿಗಳನ್ನು ನಿಯಂತ್ರಣದಲ್ಲಿಡಬೇಕು. ಎಲ್ಲದಕ್ಕೂ ಪೊಲೀಸ್ ಮತ್ತು ಸರ್ಕಾರಕ್ಕೆ ಕಾಯುವ ಅಗತ್ಯವಿಲ್ಲ. ಸಮಾಜದಲ್ಲಿ ಎಲ್ಲ ಸಮುದಾಯಗಳಲ್ಲಿ ಪ್ರಮುಖರು ಹಾಗೂ ವಿದ್ಯಾವಂತರು ಇದ್ದೇ ಇರುತ್ತಾರೆ. ಅವರು ತನ್ನ ಸಮುದಾಯದಲ್ಲಿರುವ ದುಷ್ಟ ಶಕ್ತಿಗಳನ್ನು ನಿಯಂತ್ರಿಸಬೇಕು. ಸಾಮಾಜಿಕ ನಿಯಂತ್ರಣ ಬಹಳ ಮುಖ್ಯ. ಇಂಥ ಘಟನೆಗಳು ನಡೆದಾಗ ಸರ್ಕಾರ ಮತ್ತು ಪೊಲೀಸರನ್ನು ದೂಷಿಸುವುದು ಸುಲಭ. ಆದರೆ ಇದನ್ನು ನಿಯಂತ್ರಿಸುವುದು ಪೊಲೀಸರೊಬ್ಬರಿಂದಲೇ ಸಾಧ್ಯವಿಲ್ಲ. ಮಧ್ಯಪ್ರದೇಶ ಮೊದಲಿನಿಂದಲೂ ಅತ್ಯಾಚಾರಕ್ಕೆ ಕುಖ್ಯಾತಿ ಪಡೆದಿದೆ. ಅದಕ್ಕೆ ಹಲವು ಕಾರಣಗಳಿರಬಹುದು. ಅವುಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷ ಆಡಳಿತದಲ್ಲಿರಲಿ. ಮೊದಲು ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಂಡಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯ ಇಳಿಮುಖಗೊಳ್ಳುತ್ತದೆ.
ಲಿಂಗ ಅಸಮಾನತೆ ಮಧ್ಯಪ್ರದೇಶದಲ್ಲಿ ಹೆಚ್ಚಾಗಿದೆ. ಪ್ರತಿ ೧ ಸಾವಿರ ಗಂಡಸರಿಗೆ ೯೩೧ ಹೆಂಗಸರು ಇದ್ದಾರೆ. ಇದು ದೇಶದ ಸರಾಸರಿಗಿಂತ ಕಡಿಮೆ. ಅಂದರೆ ಹೆಣ್ಣುಮಕ್ಕಳ ಜನನ ಪ್ರಮಾನ ಕಡಿಮೆಯಾಗುತ್ತಿದೆ ಎಂದರ್ಥ. ಇದರ ಕಡೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಮಹಿಳೆಯರಿಗೆ ಉತ್ತಮ ಶಿಕ್ಷಣ ಮತ್ತು ಉದ್ಯೋಗದಲ್ಲಿ ಆದ್ಯತೆ ನೀಡುವುದು ಅಗತ್ಯ. ಆದಿವಾಸಿಗಳು ಮತ್ತು ದಲಿತ ಮಹಿಳೆಯರ ಮೇಲೆ ಹೆಚ್ಚು ದಬ್ಬಾಳಿಕೆ ನಡೆಯುವುದು ನಿಲ್ಲಬೇಕು ಎಂದರೆ ಮಹಿಳೆಯರ ಸಬಲೀಕರಣ ನಿಜವಾದ ಅರ್ಥದಲ್ಲಿ ನಡೆಯಬೇಕು. ಇವುಗಳು ಆರ್ಥಿಕ ವಿಷಯವೇ ಹೊರತು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಯಾವುದೇ ರಾಜಕೀಯ ಪಕ್ಷ ಆಡಳಿತದಲ್ಲಿದ್ದರೂ ಈ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಮಾಡಬೇಕು. ರಾಜಕೀಯ ಘೋಷಣೆಗಳು ನೆರವಿಗೆ ಬರುವುದಿಲ್ಲ.
ಉಜ್ಜಯಿನಿಯಲ್ಲಿ ಬಾಲಕಿ ಅತ್ಯಾಚಾರಕ್ಕೆ ಒಳಗಾಗಿ ಬೀದಿಯಲ್ಲಿ ಅಂಗಾಲಾಚಿದರೂ ಜನ ನೆರವಿಗೆ ಬರಲಿಲ್ಲ ಎಂದರೆ ಜನರಲ್ಲಿರುವ ಭೀತಿ ಕಾರಣವಾಗಿರಬಹುದು. ಅವರು ಅಸಹಾಯಕರಾಗಿ ಮೂಕ ಪ್ರೇಕ್ಷಕರಾಗಿರಬಹುದು. ಇಲ್ಲ ಎಂದರೆ ಅಲ್ಲಿಯ ಜನ ಸಾಂಸ್ಕೃತಿಕವಾಗಿ ಮಾನವೀಯತೆಯನ್ನು ಕಳೆದುಕೊಂಡಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ. ಹಳ್ಳಿಗಳಲ್ಲಿ ಮಹಿಳೆಯರು ನಿರ್ಭಯವಾಗಿ ಜೀವನ ನಡೆಸುತ್ತಾರೆ. ಅಲ್ಲಿ ಪೊಲೀಸರು ಕಾವಲು ಇರುವುದಿಲ್ಲ. ಸಮಾಜವೇ ರಕ್ಷಣೆ ಒದಗಿಸುತ್ತದೆ. ಉಜ್ಜಯಿನಿಯಲ್ಲಿ ಸಮಾಜ ತನ್ನ ಹಿಡಿತವನ್ನು ಕಳೆದುಕೊಂಡಿದೆಯೇ ಎಂಬ ಶಂಕೆ ತಲೆ ಎತ್ತುತ್ತದೆ. ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ಮನ್ನಣೆ ಗಳಿಸಿದರೂ ಇಂಥ ವಿಷಯದಲ್ಲಿ ಹಿಂದುಳಿದಿದ್ದೇವೆ ಎಂಬುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇದಕ್ಕೆ ಒಬ್ಬರಿಬ್ಬರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಮಹಿಳೆಯರು ಮತ್ತು ಮಕ್ಕಳ ಬದುಕು ಎಲ್ಲಿ ಉತ್ತಮವಾಗಿರುತ್ತದೊ ಅಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಸಾಧ್ಯ ಎಂಬುದನ್ನು ಎಲ್ಲ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಇದು ಮಧ್ಯಪ್ರದೇಶಕ್ಕೂ ಅನ್ವಯಿಸುವ ಮಾತು. ವೈಜ್ಞಾನಿಕ ಬೆಳವಣಿಗೆ ಒಂದು ಕಡೆ ಸಾಂಸ್ಕೃತಿಕ ಶ್ರೀಮಂತಿಕೆ ಎರಡೂ ಮುಖ್ಯ. ಇದನ್ನು ಮನಗಂಡ ಸಮಾಜ ಮಾತ್ರ ಸಮಾನ ಬೆಳವಣಿಗೆ ಕಾಣಲು ಸಾಧ್ಯ. ಮಧ್ಯಪ್ರದೇಶದ ಬಾಲಕಿಯ ಆಕ್ರಂದನ ನಮ್ಮೆಲ್ಲರ ಕಣ್ಣು ತೆರೆಸಬೇಕು.