ಮತ ಹಾಕದವರ ಮನಗೆಲ್ಲಿ

ಡಿ.ಕೆ. ಶಿವಕುಮಾರ
Advertisement

ಬೆಂಗಳೂರು: ನೂತನ ಸಂಸದರು ಜನರ ಧ್ವನಿಯಾಗಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ಮಲತಾಯಿ ಧೋರಣೆ ವಿರುದ್ಧ ಧ್ವನಿ ಎತ್ತಬೇಕು. ಕಾಂಗ್ರೆಸ್‌ಗೆ ಮತ ಹಾಕದವರ ಮನ ಗೆಲ್ಲಬೇಕು ಎಂದು ರಾಹುಲ್ ಗಾಂಧಿ ಅವರು ಸಲಹೆ ನೀಡಿದರು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೮ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಜತೆ ಚರ್ಚೆ ಮಾಡಿದರು. ಲೋಕಸಭೆಗೆ ಆಯ್ಕೆಯಾದ ೯ ಸಂಸದರಿಗೆ ಅಭಿನಂದನೆ ಸಲ್ಲಿಸಿ ಮೊದಲ ಬಾರಿಗೆ ಗೆದ್ದವರು ಕ್ಷೇತ್ರದಿಂದ ದೂರ ಉಳಿಯಬಾರದು. ಬೆಂಗಳೂರು ಹಾಗೂ ದೆಹಲಿಗಿಂತ ಹೆಚ್ಚಾಗಿ ಕ್ಷೇತ್ರದ ಜನರ ಸಂಪರ್ಕದಲ್ಲಿ ಇರಬೇಕು. ನಮ್ಮದೇ ಸರ್ಕಾರ ರಾಜ್ಯದಲ್ಲಿದ್ದು, ಅದರ ನೆರವು ಪಡೆದು ಜನರ ಪರವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾಗಿ ಡಿಕೆಶಿ ವಿವರಿಸಿದರು.
ಪರಾಭವಗೊಂಡ ಅಭ್ಯರ್ಥಿಗಳಿಗೂ ಧೈರ್ಯ ತುಂಬಿದ ಅವರು, ನೀವು ಸೋತರೂ ಜನರ ಮಧ್ಯೆ ಇರಬೇಕು ಹಾಗೂ ನಮಗೆ ಮತ ನೀಡದವರ ಹೃದಯ ಗೆಲ್ಲಬೇಕು ಎಂದು ಮಾರ್ಗದರ್ಶನ ನೀಡಿದ್ದಾರೆ. ಕೆಲವು ಸಚಿವರ ಕ್ಷೇತ್ರದಲ್ಲಿ ಚುನಾವಣೆ ಸೋತ ಬಗ್ಗೆ ಚರ್ಚೆ ಮಾಡಿದರು. ಎಲ್ಲೆಲ್ಲಿ ಹಿನ್ನಡೆಯಾಗಿದೆ ಅಲ್ಲಿ ಸರಿಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ ಎಂದರು. ರಾಹುಲ್ ಗಾಂಧಿ ನ್ಯಾಯಾಲಯ ಹಾಗೂ ಕಾನೂನಿಗೆ ಗೌರವ ಕೊಟ್ಟು ಕೋರ್ಟ್ ವಿಚಾರಣೆಗೆ ಹಾಜರಾಗಿದ್ದಾರೆ. ವಾಸ್ತವವಾಗಿ ಈ ಪ್ರಕರಣಕ್ಕೂ ಅವರಿಗೂ ಸಂಬಂಧವೇ ಇಲ್ಲ. ಆದರೂ ಉದ್ದೇಶಪೂರ್ವಕವಾಗಿ ಅವರನ್ನು ಎಳೆದುತರಲಾಗಿದೆ ಎಂದು ಡಿಕೆಶಿ ದೂರಿದರು. ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿ.ಕೆ. ಸುರೇಶ್ ಅವರ ಸ್ಪರ್ಧೆ ವಿಚಾರವಾಗಿ ಕೇಳಿದಾಗ, ಆ ಬಗ್ಗೆ ಆಲೋಚನೆ ಮಾಡಿಲ್ಲ. ಸುರೇಶ್ ಅವರಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವ ಆತುರವಿಲ್ಲ. ಅಲ್ಲಿ ಅನೇಕ ಕಾರ್ಯಕರ್ತರಿದ್ದು, ಮುಂದೆ ನೋಡೋಣ ಎಂದರು.