ಹುಬ್ಬಳ್ಳಿ: ವಾಹನ ಟ್ರ್ಯಾಕಿಂಗ್‌ಗೆ ಸಂಬಂಧಪಟ್ಟಂತೆ `ಸೆಮಿಕಂಡಕ್ಟರ್’ ಡಿವೈಸ್ ತಯಾರಿಸುವ ಬೆಂಗಳೂರು ಮೂಲದ ವೆಹಿಕಲ್ ಟೆಲಿಮೆಕ್ಸ್ ಹಾರ್ಡ್ವೇರ್ ಕಂಪನಿ ಐಟ್ರೈಆ್ಯಂಗಲ್ ಇನ್‌ಫೋಟೆಕ್ ಪ್ರೈವೇಟ್ ಲಿಮಿಟೆಡ್ ಮತ್ತು ಸಾಫ್ಟವೇರ್ ಕಂಪನಿಯಾದ ಜೆಲಿವೊಟ್ ಕಂಪನಿಯ ಹುಬ್ಬಳ್ಳಿ ಶಾಖೆಗಳು ಇಲ್ಲಿನ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿರುವ ಕೆಎಲ್‌ಇ ಐಟಿ ಪಾರ್ಕ್‌ನಲ್ಲಿ ಮಂಗಳವಾರ ಕಾರ್ಯಾರಂಭಿಸಿದವು.
ಈ ನೂತನ ಶಾಖೆಗಳನ್ನು ಉದ್ಘಾಟಿಸಿದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಶೆಟ್ಟರ ಮಾತನಾಡಿ, ಬೆಂಗಳೂರಿನ ಆಚೆ ಐಟ್ರೈಆ್ಯಂಗಲ್, ಜೆಲಿವೊಟ್ ಜಂಟಿಯಾಗಿ ಬಂದು ಇಲ್ಲಿ ಶಾಖೆಗಳನ್ನು ಆರಂಭ ಮಾಡಿರುವುದು ನಿಜಕ್ಕೂ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಅವಕಾಶ ಮತ್ತು ಪ್ರೋತ್ಸಾಹಕ್ಕೆ ಪೂರಕವಾಗಿದೆ ಎಂದು ನುಡಿದರು.
ಇಲ್ಲಿಯವರೇ ಆದ ವಾದಿರಾಜ ಕಟ್ಟಿ ಅವರು ಕೆಎಲ್‌ಇ ಕ್ಯಾಂಪಸ್‌ನಲ್ಲಿ ತಮ್ಮ ಕಂಪನಿ ಶಾಖೆ ಆರಂಭಿಸಲು ಉತ್ಸುಕತೆ ತೋರಿದ್ದು ಗಮನಾರ್ಹ. ಇಂತಹ ಕಳಕಳಿಯುಳ್ಳ ಮತ್ತು ಉದ್ಯಮ ಕ್ಷೇತ್ರದಲ್ಲಿ ಹೆಜ್ಜೆ ಗುರುತು ಹೊಂದಿರುವ, ಭರವಸೆದಾಯಕ ಯೋಜನೆಗಳನ್ನು ಹೊಂದಿರುವ ಯುವ ಉತ್ಸಾಹಿಗಳಿಗೆ ಕೆಎಲ್‌ಇ ತಾಂತ್ರಿಕ ವಿವಿ ಬಾಗಿಲು ತೆರೆದಿರುತ್ತದೆ. ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ ಎಂದು ಹೇಳಿದರು.
ಸಾಫ್ಟವೇರ್ ಮತ್ತು ಹಾರ್ಡ್ವೇರ್ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕ ಅಪಾರ ಪ್ರತಿಭೆಗಳಿವೆ. ಇಲ್ಲಿ ಅವರಿಗೆ ಪೂರಕ ಅವಕಾಶ, ವಾತಾವರಣ ಇಲ್ಲದೇ ಇರುವುದರಿಂದ ಪ್ರತಿಭಾ ಪಲಾಯನ ಆಗುತ್ತಿದೆ. ಈ ಕೊರತೆ ನೀಗಿಸುವಲ್ಲಿ ಕೆಎಲ್‌ಇ ವಿವಿಯು ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ಪ್ರಯತ್ನದ ಭಾಗವೇ ಐ ಟ್ರೈಆ್ಯಂಗಲ್ ಮತ್ತು ಜೆಲಿವೊಟ್ ಕಂಪನಿಗಳು ಇಲ್ಲಿ ಕಂಪನಿ ಆರಂಭಿಸಲು ಕಾರಣ. ಈ ಕಂಪನಿಗಳು ತಾವು ಬೆಳೆಯುವುದರ ಜೊತೆಗೆ ಈ ಭಾಗದ ಪ್ರತಿಭೆಗಳಿಗೂ ಅವಕಾಶ ನೀಡಬೇಕು. ನಮ್ಮ ವಿವಿಯ ವಿದ್ಯಾರ್ಥಿಗಳ ಜ್ಞಾನವೃದ್ಧಿಗೆ ಪೂರಕ ಸಲಹೆ, ಮಾರ್ಗದರ್ಶನ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಐಟ್ರೈಆ್ಯಂಗಲ್‌ನ ವ್ಯವಸ್ಥಾಪಕ ನಿರ್ದೇಶಕ ವಾದಿರಾಜ ಕಟ್ಟಿ ಮಾತನಾಡಿ, ವಾಹನ ಟ್ರ್ಯಾಕಿಂಗ್‌ಗೆ ಸಂಬಂಧಪಟ್ಟಂತೆ ಸೆಮಿಕಂಡಕ್ಟರ್ ಡಿವೈಸ್ ತಯಾರಿಕೆಯಲ್ಲಿ ನಮ್ಮ ಕಂಪನಿಯು ಭಾರತದಲ್ಲಿ ಅಗ್ರಣೀಯ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಬೆಂಗಳೂರಿನಾಚೆ ಶಾಖೆ ಆರಂಭಿಸುವ ಚಿಂತನೆ ಮಾಡಿದ ಹುಬ್ಬಳ್ಳಿಯಲ್ಲಿ ಆರಂಭಿಸಲು ನಿರ್ಧಾರ ಮಾಡಲಾಯಿತು. ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿಗಳು ಕ್ಯಾಂಪಸ್‌ನಲ್ಲಿ ಶಾಖೆ ಆರಂಭಿಸಲು ಅವಕಾಶ ಕಲ್ಪಿಸಿ ಪ್ರೋತ್ಸಾಹಕ್ಕೆ ಮುಂದಾಗಿರುವುದು ಶ್ಲಾಘನೀಯ. ಅವರ ನಿರೀಕ್ಷೆಗಳನ್ನು ನಮ್ಮ ಕಂಪನಿ ಹುಸಿಗೊಳಿಸಲ್ಲ ಎಂದು ನುಡಿದರು.