ಮತಬ್ಯಾಂಕ್‌ಗಾಗಿ ಕಾಂಗ್ರೆಸ್ ನೀಡಿದ್ದ ಮೀಸಲಾತಿ ರದ್ಧುಗೊಳಿಸಿ ನ್ಯಾಯ ಒದಗಿಸಿದ್ದೇವೆ

ಶೋಭಾ ಕರಂದ್ಲಾಜೆ
Advertisement

ದಾವಣಗೆರೆ: ರಾಜ್ಯದಲ್ಲಿ ಮತ ಬ್ಯಾಂಕ್ ಓಲೈಕೆಗಾಗಿ ಮುಸ್ಲಿಮರಿಗೆ ಕಾಂಗ್ರೆಸ್ ಪಕ್ಷವು ಕಾನೂನು ಬಾಹಿರವಾಗಿ ಮೀಸಲಾತಿ ನೀಡಿದ್ದು, ಅದನ್ನು ತೆಗೆದು ಹಾಕುವ ಮೂಲಕ ಎಲ್ಲರಿಗೂ ನ್ಯಾಯ ಒದಗಿಸಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಮರ್ಥಿಸಿಕೊಂಡರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮದ ಆಧಾರದಲ್ಲಿ ಮೀಸಲಾತಿಯನ್ನು ಕೊಡುವಂತಿಲ್ಲ. ಆದರೆ, ಕಾಂಗ್ರೆಸ್ ಪಕ್ಷವು ಮುಸ್ಲಿಂ ಮತ ಬ್ಯಾಂಕ್‌ನ ಓಲೈಕೆಗಾಗಿ ಕಾನೂನು ಬಾಹಿರವಾಗಿ ಮುಸ್ಲಿಮರಿಗೆ ಮೀಸಲಾತಿ ನೀಡಿತ್ತು ಎಂದರು.
ಜಾತಿ, ಹಿಂದುಳಿದವರ ಬಗ್ಗೆ ಮೀಸಲಾಗಿ ನೀಡಬೇಕು. ನಮ್ಮ ಲಿಂಗಾಯತ, ಒಕ್ಕಲಿಗ, ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಡಲಾಗಿದೆ. ಇದು ಸಂವಿಧಾನದಡಿಯಲ್ಲಿ ಮಾಡಿರುವ ಕೆಲಸವಾಗಿದೆ. ಭೋವಿ, ಕೊರಚ
ಸಮುದಾಯಗಳಿಗೆ ಅನ್ಯಾಯ ಆಗಿಲ್ಲ. ಆದರೆ, ಆ ಸಮಾಜದ ಜನರಿಗೆ ತಪ್ಪು ಕಲ್ಪನೆ ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಧ್ವನಿ ಇಲ್ಲದಂತಹವರಿಗೆ ಮೀಸಲಾತಿ ಸಿಗುತ್ತಿರಲಿಲ್ಲ. ಇಂದು ಮೀಸಲಾತಿ ತಂದು, ನ್ಯಾಯ ಕೊಟ್ಟಿದ್ದು ನಮ್ಮ ಸರ್ಕಾರ. ಕಾಂಗ್ರೆಸ್ಸಿನ ಷಡ್ಯಂತ್ರದಿಂದ ತಪ್ಪು ಸಂದೇಶ ಹೋಗುತ್ತಿದೆ. ಎಲ್ಲಾ ಸಮಾಜಕ್ಕೆ ಧ್ವನಿ ಕೊಡುವ ಕೆಲಸ
ಮಾಡಲಾಗಿದೆ. ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಒಳ ಮೀಸಲಾತಿ ಜಾರಿಗೆ ತರಲಾಗಿದೆ. ಒಳ ಮೀಸಲಾತಿ ಕಲ್ಪಿಸುವ ಧೈರ್ಯವನ್ನು ಈವರೆಗೆ ಯಾರೂ ತೋರಲಿಲ್ಲ. ಒಳ ಮೀಸಲಾತಿ ಕಲ್ಪಿಸುವ ಮೂಲಕ ಬಿಜೆಪಿ ನ್ಯಾಯ ಕೊಟ್ಟಿದೆ ಎಂದು ಹೇಳಿದರು.
ಪಕ್ಷದ ಅಪೇಕ್ಷೆಯಂತೆ ಕಾರ್ಯಕರ್ತರ ಅಭಿಪ್ರಾಯ ಕೇಳಲು ದಾವಣಗೆರೆ ಜಿಲ್ಲೆಯ ೭ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಚನಾವಣೆ ನಡೆಸಿದ್ದೇವೆ. ಬೂತ್ ಪ್ರಮುಖರು, ಕಾರ್ಯಕರ್ತರು, ಜನ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ತಿಳಿಸಲು ಒಂದು ಅವಕಾಶ ಕಲ್ಪಿಸಲಾಗಿದೆ. ರಾಜ್ಯದಿಂದ ಅಂತಿಮ ಹೆಸರುಗಳನ್ನು ಕೇಂದ್ರಕ್ಕೆ ಕಳಿಸಲಾಗುತ್ತದೆ. ಕೇಂದ್ರಕ್ಕೆ ಹೋದ ನಂತರ ಸೀಟುಗಳ ಹಂಚಿಕೆಯಾಗುತ್ತದೆ ಎಂದು ಅವರು ತಿಳಿಸಿದರು.