ಮಣಿಪುರ ಪ್ರಕ್ಷುಬ್ಧ ಸಂಧಾನವೇ ಪರಿಹಾರ

ಸಂಪಾದಕೀಯ
Advertisement

ಈಶಾನ್ಯ ರಾಜ್ಯಗಳಲ್ಲಿ ಬುಡಕಟ್ಟು ಜನಾಂಗಗಳ ನಡುವೆ ವೈಮನಸ್ಯ ಇರುವುದು ಇಂದು ನಿನ್ನೆಯದಲ್ಲ. ಶಾಸನದ ಮೂಲಕ ವೈಮನಸ್ಯವನ್ನು  ಹೋಗಲಾಡಿಸಲು ಬರುವುದಿಲ್ಲ. ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದರೆ ಈಶಾನ್ಯ ರಾಜ್ಯಗಳನ್ನು ಚೆನ್ನಾಗಿ ಬಲ್ಲ ಎಲ್ಲ ಬುಡಕಟ್ಟುಗಳೊಂದಿಗೆ ಸಂಪರ್ಕ ಹೊಂದಿರುವ ಅನುಭವಿ ವ್ಯಕ್ತಿಯನ್ನು ಸಂಧಾನಕ್ಕೆ ನೇಮಿಸುವುದು ಅಗತ್ಯ. ಸ್ವಾತಂತ್ರ್ಯ ಬಂದ ದಿನದಿಂದ ಈಶಾನ್ಯ ರಾಜ್ಯಗಳನ್ನು ಕಡೆಗಣಿಸುತ್ತ ಬರಲಾಗಿದೆ. ಆ ರಾಜ್ಯಗಳು ಮುಖ್ಯವಾಹಿನಿಗೆ ಸೇರಿಕೊಳ್ಳುವಂತೆ ಕೇಂದ್ರ ಸರ್ಕಾರ ಗಂಭೀರ ಪ್ರಯತ್ನ ಮಾಡಿಲ್ಲ. ಹೀಗಾಗಿ ಈಶಾನ್ಯ ರಾಜ್ಯಗಳಲ್ಲಿ ಕಾನೂನು ಸಮಸ್ಯೆ ತಲೆದೋರಿದಾಗ ಮಾತ್ರ ಇಡೀ ದೇಶ ಅದರ ಬಗ್ಗೆ ಚಿಂತನೆ ನಡೆಸುವಂತಾಗಿದೆ.

ಈಶಾನ್ಯ ರಾಜ್ಯಗಳಲ್ಲಿ ಬುಡಕಟ್ಟು ಜನಾಂಗಗಳ ಪ್ರಾಬಲ್ಯ  ಅಧಿಕವಾಗಿದೆ. ಈ  ಜನಾಂಗಗಳು ಮುಖ್ಯವಾಹಿನಿಯಲ್ಲಿ ಬೆರೆಯಬೇಕಿತ್ತು. ಯುವಕ ಮತ್ತು ಯುವತಿಯರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಉದ್ಯೋಗಾವಕಾಶ ಮಾಡಿಕೊಡಬೇಕು. ಅದೇ ರೀತಿ ಆ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳು ತಲೆ ಎತ್ತಬೇಕು. ಪ್ರವಾಸೋದ್ಯಮ ಪ್ರಮುಖ ಆದಾಯದ ಮೂಲ. ಅದು ಅಭಿವೃದ್ಧಿಯಾಗಬೇಕು ಎಂದರೆ ಶಾಂತಿ ಮತ್ತು ನೆಮ್ಮದಿ ನೆಲೆಸಬೇಕು.

ಹೊರರಾಜ್ಯಗಳಿಂದ ಜನ ಬಂದು ಇಲ್ಲಿ ಉದ್ಯೋಗ ಕೈಗೊಳ್ಳಲು ಸಾಧ್ಯವಾಗುತ್ತದೆ. ಬೇರೆ ರಾಜ್ಯಗಳು ಶರವೇಗದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಕಾಣುತ್ತಿದ್ದರೆ, ಈಶಾನ್ಯ ರಾಜ್ಯಗಳು ಇನ್ನೂ ಹಿಂದುಳಿದಿದೆ. ಅಲ್ಲಿಯ ಜನರಿಗೆ ಕಾಯಕ ಸಂಸ್ಕೃತಿಯ ಮಹತ್ವವನ್ನು ತಿಳಿಸಿಕೊಡಬೇಕು. ಅಲ್ಲಿಯ ಜನ ಮುಗ್ಧರು. ಅವರು ಬೇಗನೇ ಹೊರಗಿನ ಪ್ರಭಾವಕ್ಕೆ ಒಳಗಾಗುತ್ತಾರೆ.

ಇದನ್ನು ತಪ್ಪಿಸಬೇಕು ಎಂದರೆ ದೇಶದ ಇತರ ರಾಜ್ಯಗಳೊಂದಿಗೆ ಈಶಾನ್ಯ ಭಾಗದ ಜನ ದಿನನಿತ್ಯ ವ್ಯವಹಾರ ನಡೆಸುವಂತೆ ಆಗಬೇಕು. ಆಗ ಅಲ್ಲಿಯ ಜನರ ಕಷ್ಟ ಸುಖಗಳಿಗೆ ಇತರ ರಾಜ್ಯಗಳ ಜನ ಸ್ಪಂದಿಸುತ್ತಾರೆ. ಇದು ಮಾನಸಿಕವಾಗಿ ನಡೆಯಬೇಕಾದ ಕೆಲಸ. ಇದಕ್ಕೂ ಶಾಸನಕ್ಕೂ ಸಂಬಂಧವಿಲ್ಲ. ಅಲ್ಲಿಯ ರಾಜಕೀಯ ಗುಂಪುಗಳು ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಅರಿತು ಎಲ್ಲರೊಂದಿಗೆ ಚರ್ಚಿಸಿ ಒಮ್ಮತದ ಅಭಿಪ್ರಾಯ ಮೂಡುವಂತೆ ಮಾಡುವ ವ್ಯಕ್ತಿ ಅಥವ ವ್ಯಕ್ತಿಗಳ ಅಗತ್ಯವಿದೆ. ಈಗ ಮಣಿಪುರದಲ್ಲಿ ಮೆಯ್ಟಿ ಜನಾಂಗ ಪ್ರಮುಖವಾಗಿದೆ.

ಈ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈಗ ಪರಿಶಿಷ್ಟ ಜನಾಂಗಕ್ಕೆ ಸೇರಿಸಿ ಮೀಸಲಾತಿ ನೀಡುವಂತೆ ಒತ್ತಾಯಿಸುತ್ತಿದೆ. ಉಳಿದ ಬುಡಕಟ್ಟು ಜನಾಂಗಗಳಾದ ಕುಕಿ ಮತ್ತು ನಾಗಾಗಳು  ಮೆಯ್ಟಿ ಜನಾಂಗಕ್ಕೆ  ಮೀಸಲಾತಿ ನೀಡುವುದಕ್ಕೆ ತೀವ್ರವಾಗಿ ವಿರೋಧಿಸುತ್ತಿವೆ. ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಭೇಟಿ ನೀಡಿ ಪರಿಹಾರ ಕಂಡು ಹಿಡಿಯಲು ಯತ್ನಿಸಿದ್ದಾರೆ. ಇದುವರೆಗೆ ಸಮಸ್ಯೆಗಳಿಗೆ ತೇಪೆ ಹಚ್ಚುವ ಕೆಲಸ ನಡೆದಿದೆಯೇ ಹೊರತು ಶಾಶ್ವತ ಪರಿಹಾರ ಕಂಡು ಹಿಡಿಯುವ ಕೆಲಸ ನಡೆದಿಲ್ಲ.

ಈಶಾನ್ಯ ರಾಜ್ಯಗಳಲ್ಲಿ ನಾಗರಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಮಿಲಿಟರಿ ನೆರವು ಪಡೆಯಲಾಗುತ್ತಿದೆ. ಇದಕ್ಕಾಗಿ ಎಎಫ್‌ಎಸ್‌ಪಿಎ ಕಾಯ್ದೆಯನ್ನು ಬಳಸಿಕೊಳ್ಳಲಾಗುತ್ತಿದೆ. ಮಿಲಿಟರಿಯನ್ನು ಬಳಸಬೇಕು ಎಂದರೆ ಆ ಪ್ರದೇಶ ಗಲಭೆಪೀಡಿತ ಎಂದು ಘೋಷಿಸಬೇಕು. ಅಲ್ಲಿ ನಾಗರಿಕ ಹಕ್ಕುಗಳಿಗೆ  ಧಕ್ಕೆ ಒದಗುವುದು ಸಹಜ. ಮಾನವ ಹಕ್ಕು ಉಲ್ಲಂಘನೆ ಆಗುತ್ತದೆ ಎಂಬ ಕೂಗು ಕೇಳಿ ಬರುತ್ತದೆ. ಇದನ್ನು ಕೈಬಿಡಬೇಕು ಎಂದರೆ ಮಿಲಿಟರಿ ಬಳಕೆ ನಿಲ್ಲಬೇಕು.

ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಪ್ರವೃತ್ತರಾಗಬೇಕು. ಪೊಲೀಸ್ ಬಲ ಬಳಕೆಯಾಗಬೇಕು ಎಂದರೆ ಸ್ಥಳೀಯ ಆಡಳಿತ ಚುರುಕುಗೊಳ್ಳಬೇಕು. ಎಲ್ಲ ವರ್ಗಗಳ ನಡುವೆ ಹಾಗೂ ಎಲ್ಲ ರಾಜಕೀಯ ಪಕ್ಷಗಳ ನಡುವೆ ಮುಕ್ತ ಚರ್ಚೆ ನಡೆದು ರಾಜ್ಯದ ಹಿತ ಕಾಪಾಡುವುದು ಮುಖ್ಯ ಎಂಬ ತೀರ್ಮಾನಕ್ಕೆ ಬರಬೇಕು. ಆಗ ಈಶಾನ್ಯ ರಾಜ್ಯದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯವಾಗಲಿದೆ. ಹಿಂದೆ ಕಾಶ್ಮೀರದಲ್ಲೂ ಇದೇ ಪರಿಸ್ಥಿತಿ ಇತ್ತು. ಅದನ್ನು ಈಗ ನಿಯಂತ್ರಣಕ್ಕೆ ತರಲು ಸಾಧ್ಯವಾಗಿದೆ. ಪಂಜಾಬ್‌ನಲ್ಲೂ ಇದೇ ಪರಿಸ್ಥಿತಿ ಇತ್ತು. ಈಗ ಅಲ್ಲೂ ಜನಾದೇಶ ಪಡೆದ ಸರ್ಕಾರ ಸುಸ್ಥಿರ ಆಡಳಿತ ನಡೆಸಲು ಸಾಧ್ಯವಾಗಿದೆ.

ದೇಶ ವಿರೋಧಿ ಶಕ್ತಿಗಳು ಯಾವ ರಾಜ್ಯದಲ್ಲಿ ಆಡಳಿತ ದುರ್ಬಲ ಎಂದು ಕಂಡಕೂಡಲೇ ಅಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಯತ್ನಿಸುತ್ತದೆ. ಇದು ಇದುವರೆಗಿನ ಇತಿಹಾಸವನ್ನು ಅವಲೋಕಿಸಿದರೆ ತಿಳಿಯುತ್ತದೆ. ಸ್ಥಳೀಯ ಸರ್ಕಾರ ಮತ್ತು ಪ್ರಜ್ಞಾವಂತ ಜನ ದೇಶ ವಿರೋಧಿ ಶಕ್ತಿಗಳಿಗೆ ಅವಕಾಶ ನೀಡಬಾರದು. ಯುವ ಜನಾಂಗಕ್ಕೆ ಉತ್ತಮ ಶಿಕ್ಷಣ ಮತ್ತು ವಿಪುಲ ಉದ್ಯೋಗ ಅವಕಾಶ ಲಭಿಸಿದರೆ ದುಷ್ಟಶಕ್ತಿಗಳೊಂದಿಗೆ ಸೇರುವುದಿಲ್ಲ.

ಇಂದಿನ ಇಂಟರ್‌ನೆಟ್ ಮತ್ತು ಕಂಪ್ಯೂಟರ್ ಯುಗದಲ್ಲಿ ದೇಶದ ಯಾವುದೇ ಮೂಲೆಯಲ್ಲಿದ್ದರೂ  ಮಾಹಿತಿ ಪಡೆಯಬಹುದು. ಜ್ಞಾನ ಈಗ ಎಲ್ಲರಿಗೂ ಲಭಿಸುವಂತಾಗಿದೆ. ಹೀಗಾಗಿ ಈಶಾನ್ಯ ರಾಜ್ಯಗಳ ಬುಡಕಟ್ಟು ಜನಾಂಗದ ಯುವಕ-ಯುವತಿಯರಲ್ಲಿ ಹೊಸ ಉತ್ಸಾಹ ಮೂಡಿಸಲು ಅವಕಾಶವಿದೆ. ಮಿಲಿಟರಿ ಬಂದೂಕಿನ ನಳಿಕೆಯಿಂದ  ಶಾಂತಿ- ನೆಮ್ಮದಿ ಬರುವುದಿಲ್ಲ. ಪರಸ್ಪರ ಪ್ರೀತಿ ವಿಶ್ವಾಸದಿಂದ ಮಾತ್ರ ಪ್ರಗತಿ ಸಾಧ್ಯ ಎಂಬುದನ್ನು ಅಲ್ಲಿಯ ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ.