ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ

Advertisement

ಸಾಮಾನ್ಯವಾಗಿ ನಮಗೆ ಮಕ್ಕಳಾದ ಮೇಲೆ ಇನ್ನಷ್ಟು ಮತ್ತಷ್ಟು ಕಷ್ಟಪಟ್ಟು ದುಡಿದು ನಮ್ಮ ಮಕ್ಕಳಿಗೆ ಏನೂ ತೊಂದರೆಯಾಗದಂತೆ ಪಾಲನೆ ಪೋಷಣೆ ಮಾಡಲು ನಮ್ಮ ಜೀವ ಪಣಕ್ಕಿಟ್ಟು ಹಣ ಗಳಿಸುತ್ತೇವೆ. ಆದರೆ ಬೆಳೆದ ಮಕ್ಕಳು ಏನು ಮಾಡುತ್ತಾರೆ. ಎಲ್ಲಿ ಹೋಗುತ್ತಾರೆ. ಅವರ ದೈನಂದಿನ ಚಲನ ವಲನದ ಕಡೆಗೆ ನಾವು ಗಮನ ಹರಿಸುವುದಿಲ್ಲ. ಆಗ ಮಕ್ಕಳು ಸ್ವೇಚ್ಛೆಯಾಗಿ ತನ್ನ ಮನಬಂದಂತೆ ಬದುಕಲಾರಂಭಿಸುತ್ತಾರೆ. ಕೆಟ್ಟವರ ಸಹವಾಸ ಮಾಡಿ ರ್ದುವ್ಯಸನಿಗಳಾಗಿ ನಾವು ಕಷ್ಟ ಪಟ್ಟು ಗಳಿಸಿದ ಎಲ್ಲಾ ಆಸ್ತಿ ನಾಶ ಮಾಡುವದರೊಂದಿಗೆ ವಾಸಿಯಾಗದ ರೋಗಕ್ಕೆ ಬಲಿಯಾಗಿ ಮನೆತನದ ಮರ್ಯಾದೆಯೊಂದಿಗೆ ಸರ್ವ ನಾಶ ಮಾಡಿ ತಾವೂ ನಾಶವಾಗುತ್ತಾರೆ.
ಮಕ್ಕಳಿಗೆ ಚಿಕ್ಕವರಿದ್ದಾಗಲೇ ಉತ್ತಮ ಸಂಸ್ಕಾರದೊಂದಿಗೆ ಶಿಕ್ಷಣ ನೀಡುತ್ತ ಉತ್ತಮರ ಸಹವಾಸದಲ್ಲಿ ಬೆಳೆಸುವ ಪ್ರಯತ್ನ ಮಾಡಬೇಕು. ಅವರಿಗೆ ತಿಳಿವಳಿಕೆ ಬರುವವರೆಗೆ ಕಟ್ಟುನಿಟ್ಟಿನ ನಿಗಾ ಇಡಬೇಕು. ಎಲ್ಲಿ ಹೋಗುತ್ತಾನೆ ಏನು ಮಾಡುತ್ತಾನೆ. ಸದಾ ಅವರಿಗೆ ಮಾರ್ಗದರ್ಶನ ನೀಡುತ್ತಿರಬೇಕು. ಮಕ್ಕಳಿಗೆ ನಮ್ಮ ಗಳಿಕೆ ಎಂದೂ ತೋರಿಸಬಾರದು. `ಬಾಪ್ ಕೀ ಕಮಾಯಿ ಸೇ ಜಾದಾ ಆಪ್ ಕೀ ಕಮಾಯಿ ಬಹುತ್ ಕಾಮಕಿ ಹೈ’ ಎನ್ನುವ ಮೂಲ ಮಂತ್ರ ಮಕ್ಕಳಿಗೆ ಹೇಳುತ್ತಿರಬೇಕು. ಆಗ ಮಗುವಿಗೆ ನಿಜವಾದ ಬದುಕಿನ ಅರಿವು ಆಗುತ್ತದೆ. ಅವನು ತನ್ನ ಸ್ವಂತ ಕಾಲ ಮೇಲೆ ನಿಂತು ಏನಾದರೂ ಮಾಡಬೇಕು. ನಾನು ನಾಲ್ಕು ಜನರ ಮಧ್ಯದಲ್ಲಿ ಉತ್ತಮನಾಗಿ ಕಾಣಬೇಕು ಎನ್ನುವ ಪ್ರಯತ್ನ ಮಾಡುತ್ತಾನೆ. ಆಗ ತಂದೆ ತಾಯಿಯ ಆಜ್ಞೆ ಪಾಲಿಸುವ ಮಗನಾಗಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಮನೆತನಕ್ಕೆ ಕೀರ್ತಿ ತರುವ ಕೆಲಸ ಮಾಡುತ್ತಾನೆ. ಪ್ರಸ್ತುತ ಸಮಯದಲ್ಲಿ ಚಿಕ್ಕ ಮಗುವಿನೊಂದಿಗೆ ಇನ್ನೂ ಸರಿಯಾಗಿ ಮಾತನಾಡಲು ಬರುವದಿಲ್ಲ. ಅಂತಹ ಕೂಸಿಗೆ ಬೇಬಿ ಸಿಟಿಂಗ್ ಅಂತಾ ಸ್ಕೂಲಿಗೆ ಕಳುಹಿಸಿ. ಆಯಿಯ ಉಡಿಯಲ್ಲಿ ಬೆಳೆಯುವ ಮಗುವಿಗೆ ತನ್ನ ನೌಕರಿ ವ್ಯವಹಾರ ನೆಪದಲ್ಲಿ ತನ್ನಿಂದ ದೂರವಿಟ್ಟು ತಂದೆ, ತಾಯಿಯ ಪ್ರೀತಿಯೇ ಆ ಮಗುವಿಗೆ ಸಿಗುವದಿಲ್ಲ. ಆಗ ಮಗು ದೂರ ಇದ್ದು ಇದ್ದು ತಾನು ದೊಡ್ಡವನಾಗಿ ಮದುವೆಯಾದ ನಂತರ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸಲು ಮುಂದಾಗುತ್ತಾನೆ. ನೀವು ಸಾಮಾನ್ಯವಾಗಿ ನೋಡಿ, ಹೆಚ್ಚು ವಿದ್ಯಾವಂತ ಮಕ್ಕಳೇ ತಮ್ಮ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸಿದ್ದಾರೆ ಎನ್ನುವುದು ಕಂಡು ಬರುತ್ತದೆ. ಆದ ಕಾರಣ ಮಕ್ಕಳಿಗೆ ತಂದೆ ತಾಯಿಗಳು ತಮ್ಮ ಉತ್ತಮ ಸಂಸ್ಕಾರ ನೀಡಿ ಸ್ವಂತ ದುಡಿದು ಸಂಪಾದನೆ ಮಾಡುವ ವ್ಯಕ್ತಿಯನ್ನಾಗಲು ಪ್ರೇರೇಪಿಸಬೇಕು.