ಮಂಗಳೂರು: ಮಂಗಳೂರು ವಿವಿ ಫಲಿತಾಂಶ ವಿಳಂಬವಾಗಿದ್ದಕ್ಕೆ ಎಬಿವಿಪಿ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ.
ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿದ ಎಬಿವಿಪಿ ಕಾರ್ಯಕರ್ತರು, ವಿ.ವಿ ಸಿಂಡಿಕೇಟ್ ಸಭೆಗೆ ಏಕಾಏಕಿ ನುಗ್ಗಲು ಯತ್ನಿಸಿದ ಘಟನೆ ನಡೆಯಿತು. ಈ ವೇಳೆ ಪೊಲೀಸರು ಮತ್ತು ಎಬಿವಿಪಿ ಕಾರ್ಯಕರ್ತರ ಮಧ್ಯೆ ನೂಕಾಟ, ತಳ್ಳಾಟ ನಡೆಯಿತು.
ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ ಹರ್ಷಿತ್ ಕೊಯ್ಲ ಮಾತನಾಡಿ, ಮಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೆ ಸತಾಯಿಸುತ್ತಿರುವುದು, ಎನ್‌ಇಪಿ ಜಾರಿಯಾದ ನಂತರ ಮೊದಲನೇ ವರ್ಷಕ್ಕೆ ಸೇರ್ಪಡೆಯಾದ ವಿದ್ಯಾರ್ಥಿಗಳು ಪ್ರಸ್ತುತ ದ್ವಿತೀಯ ವರ್ಷದಲ್ಲಿ ಇದ್ದರೂ ಸಹ ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್‌ನ ಮೌಲ್ಯಮಾಪನವನ್ನು ನಡೆಸಿ ಫಲಿತಾಂಶವನ್ನು ಈವರೆಗೂ ನೀಡದೆ ಚೆಲ್ಲಾಟವಾಡುತ್ತಿದೆ ಎಂದರು.
ಮಂಗಳೂರು ವಿ.ವಿ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್. ಧರ್ಮ ಮಾತನಾಡಿ, ಪ್ರತಿಭಟನಾಕಾರರು ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ನನ್ನ ರಾಜೀನಾಮೆಯಿಂದ ಪರಿಹಾರ ದೊರಕೋದಾದ್ರೆ ಖಂಡಿತಾ ನೀಡುವೆ. ನಾನು ಸಿದ್ಧನಾಗಿಯೇ ಬಂದಿದ್ದೇನೆ ಎಂದರು.
ಜನವರಿ 25ರ ಒಳಗಡೆ ಫಲಿತಾಂಶ ಪ್ರಕಟಣೆಗೆ ಎಲ್ಲ ವ್ಯವಸ್ಥೆ ಮಾಡುತ್ತೇವೆ ಎಂಬ ಭರವಸೆ ನೀಡಬಲ್ಲೆ ಎಂದರು. ಪರೀಕ್ಷಾಂಗ ಕುಲಸಚಿವರ ಭರವಸೆಯ ಮೇರೆಗೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆಯಿಂದ ಹಿಂದೆ ಸರಿದರು.
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಮಂಗಳೂರು ವಿವಿ ಫಲಿತಾಂಶ ವಿಳಂಬ: ಸಿಂಡಿಕೇಟ್ ಸಭೆಗೆ ನುಗ್ಗಲು ಎಬಿವಿಪಿ ಕಾರ್ಯಕರ್ತರ ಯತ್ನ