ಬಳ್ಳಾರಿ: ಮಂಗಳೂರು ಬ್ಲಾಸ್ಟ್‌ನ ಆರೋಪಿ ಬಳಸಿದ್ದ ಸಿಮ್ ಖರೀದಿಸಲು ಸಂಡೂರು ಪಟ್ಟಣದ ಪದವೀಧರನೋರ್ವನ ದಾಖಲೆ ಬಳಿಸಿದ್ದು ಬೆಳಕಿಗೆ ಬಂದಿದೆ.
31 ವರ್ಷದ ಎಂಬಿಎ ಪದವೀಧರ, ಇಂಜಿನಿಯರ್ ಅರುಣಕುಮಾರ್ ಗೌಳಿಯ ದಾಖಲೆಗಳನ್ನು ಸಿಮ್ ಖರೀದಿಸಲು ಶಂಕಿತ ಉಗ್ರ ಬಳಿಸಿದ್ದ. ಸಿಮ್ ವಿಳಾಸ ಬೆನ್ನು ಹತ್ತಿ ಬಂದ ಬೇಹುಗಾರಿಕೆ ಇಲಾಖೆ ಅಧಿಕಾರಿಗಳು ಗೌಳಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮಂಗಳೂರು ಬ್ಲಾಸ್ಟ್‌ನ ಬಗ್ಗೆ ಸರಿಯಾದ ಮಾಹಿತಿಯೂ ಸಹ ಇರದ ಗೌಳಿಯ ದಾಖಲಾತಿಗಳು ಬ್ಲಾಸ್ಟ್ ಪ್ರಕರಣಕ್ಕೆ ಬಳಿಸಿದ ಸಿಮ್ ಪಡೆಯಲು ನೀಡಲಾಗಿತ್ತು ಎಂದು ತಿಳಿದಾಗ ಬೆಚ್ಚಿ ಬಿದ್ದ.
ವಿಷಯ ತಿಳಿದು ಆಶ್ಚರ್ಯ ಚಕಿತನಾದ ಗೌಳಿ ತನ್ನ ದಾಖಲಾತಿಗಳು ಒಂದೂವರೆ ವರ್ಷದ ಹಿಂದೆ ಕಳೆದುಹೋದ ಕುರಿತು ಅಧಿಕಾರಿಗಳಿಗೆ ತಿಳಿಸಿದರು. ಕೆಲ ಹೊತ್ತು ವಿಚಾರಣೆ ನಡೆಸಿದ ನಂತರ ಐಬಿ ಅಧಿಕಾರಿಗಳಿಗೆ ಸ್ಫೋಟಕ್ಕೂ, ಅರುಣಕುಮಾರ ಗೌಳಿಗೂ ಯಾವುದೇ ಸಂಬಂಧ ಇಲ್ಲ ಎಂಬುದು ಮನವರಿಕೆ ಆಯಿತು.
31 ವರ್ಷದ ಅರುಣ್ ಕುಮಾರ್ ಗೌಳಿ ಎಂಬಿಎ ಮತ್ತು ಎಂಜಿನೀಯರಿಂಗ್ ಪದವೀಧರ, ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡಿದ್ದಾನೆ, ಹಾವೇರಿಯಲ್ಲಿ ವಿವಾಹವಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ, ಈತನ ಕುಟುಂಬದವರು ಸಂಡೂರಿನಲ್ಲಿ ವಾಸ ಮಾಡುತ್ತಿದ್ದಾರೆ.
ಸಿಮ್‌ನ ವಿಚಾರ ಟೆಕ್ಕಿ ಕುಟುಂಬದ ಆತಂಕಕ್ಕೆ ಕಾರಣವಾಗಿತ್ತು, ಆದರೆ ಪ್ರಕರಣ ಕುರಿತಾಗಿ ಸತ್ಯಾಂಶದ ವಿಚಾರ ಅಧಿಕಾರಿಗಳಿಗೆ ಮನವರಿಕೆಯಾಗಿದ್ದರಿಂದ ಅರುಣ್ ಕುಮಾರ್ ಮತ್ತು ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಬೇರೆ ಬೇರೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.