ಮಂಗಳೂರು ಪಾಲಿಕೆ ಚರಾಸ್ತಿ ಜಪ್ತಿಗೆ ಆದೇಶ

ಮಂಗಳೂರು ಪಾಲಿಕೆ
Advertisement

ಮಂಗಳೂರು: ಪಂಪ್‌ವೆಲ್‌ನಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರದ ಹಣ ಪಾವತಿ ಮಾಡದ ಕಾರಣಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಚರಾಸ್ತಿ ಜಪ್ತಿಗೆ ಜಿಲ್ಲಾ ನ್ಯಾಯಾಲಯವು ಆದೇಶ ಮಾಡಿದೆ.
ನ್ಯಾಯಾಲಯದ ಅಮೀನ್ ಅವರು ಜಪ್ತಿ ಆದೇಶ ಜಾರಿಗೆ ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಬುಧವಾರ ತೆರಳಿದ್ದರು. ಪಾಲಿಕೆಯ ಕೋರಿಕೆ ಮೇರೆಗೆ ಪರಿಹಾರ ಪಾವತಿಗೆ ಅ. 25ರವರೆಗೆ ಕಾಲಾವಕಾಶ ನೀಡಲಾಗಿದೆ.
ಪಂಪ್‌ವೆಲ್ ಬಳಿ ರಾಷ್ಟ್ರೀಯ ಹೆದ್ದಾರಿ ೬೬ರ ಪಕ್ಕದಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಉದ್ದೇಶದಿಂದ ಪಾಲಿಕೆಯು ೭ ಎಕರೆ ೨೩.೫ ಸೆಂಟ್ಸ್ ಜಾಗವನ್ನು ೨೦೦೮ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ಒಟ್ಟು ೩೩ ಕುಟುಂಬಗಳು ಇದಕ್ಕೆ ಜಮೀನು ಬಿಟ್ಟುಕೊಟ್ಟಿದ್ದವು. ನಿಗದಿಪಡಿಸಿದ ಭೂ ಪರಿಹಾರದ ಮೊತ್ತಕ್ಕೆ ೧೬ ಕುಟುಂಬಗಳು ತಕರಾರು ತೆಗೆದಿದ್ದವು. ಹೆಚ್ಚಿನ ಪರಿಹಾರ ಕೋರಿ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದವು.
ಹೆಚ್ಚಿನ ಭೂಪರಿಹಾರಕ್ಕೆ ಸಂಬಂಧಿಸಿ ೧೬ ವ್ಯಾಜ್ಯಗಳ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣಗಳಿಗೆ ಪಾಲಿಕೆಯು ತಡೆಯಾಜ್ಞೆ ತಂದಿತ್ತು. ಆದರೆ, ತಡೆಯಾಜ್ಞೆಯ ಅವಧಿ ಮುಗಿದ ಒಂದು ಪ್ರಕರಣದಲ್ಲಿ ಪಾಲಿಕೆ ಸ್ವತ್ತುಗಳ ಜಪ್ತಿಗೆ ಸಂಬಂಧಿಸಿ ನ್ಯಾಯಾಲಯವು ಆದೇಶ ಮಾಡಿತ್ತು. ಜಪ್ತಿಗೆ ಆದೇಶವಾಗಿರುವ ಪ್ರಕರಣದಲ್ಲಿ ಪಾಲಿಕೆಯು ಭೂಮಾಲಕರಿಗೆ ೩.೪೮ ಕೋಟಿ ಪರಿಹಾರ ಪಾವತಿಸಬೇಕಿದೆ.