ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಪ್ರಚಾರಾರ್ಥವಾಗಿ ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ ಅವರು ಶನಿವಾರ ಮಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ಬಿಗಿ ಬಂದೋಬಸ್ತ್ ನಡುವೆ ನಗರದ ಪುರಭವನ ಸಮೀಪದ ಕ್ಲಾಕ್ ಟವರ್‌ನಿಂದ ಅಮಿತ್ ಶಾ ಅವರ ರೋಡ್ ಶೋ ಆರಂಭವಾಯಿತು. ರಸ್ತೆಯ ಇಕ್ಕಡೆಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಅಮಿತ್ ಶಾ ಅವರು ರಸ್ತೆಯ ಎರಡೂ ಬದಿಗಳಲ್ಲಿ ನೆರೆದಿದ್ದ ಸಾವಿರಾರು ಜನರತ್ತ ಕೈಬೀಸಿದರು. ಕ್ಲಾಕ್ ಟವರ್‌ನಿಂದ ಸಂಜೆ ೬.೩೫ಕ್ಕೆ ರೋಡ್ ಶೋ ಆರಂಭವಾಯಿತು. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಕ್ಷದ ಅಭ್ಯರ್ಥಿ ಗಳಾದ ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಸತೀಶ್ ಕುಂಪಲ, ಉಮಾನಾಥ ಕೋಟ್ಯಾನ್, ಪಕ್ಷದ ಜಿಲ್ಲಾಧ್ಯಕ್ಷ ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.
ಕ್ಲಾಕ್ ಟವರ್‌ನಿಂದ ಆರಂಭವಾದ ರೋಡ್ ಶೋ:
ಕೊಡಿಯಾಲ್‌ಬೈಲ್‌ನ ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈ ಸರ್ಕಲ್ ಬಳಿ ಸಮಾಪ್ತಿಗೊಂಡಿತು. ಗೋವಿಂದ ಪೈ ಸರ್ಕಲ್ ಬಳಿ ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ರೋಡ್ ಶೋ ಹಿನ್ನೆಲೆಯಲ್ಲಿ ನಗರದ ಕ್ಲಾಕ್ ಟವರ್ ಪ್ರದೇಶವನ್ನು ಕೇಸರಿಮಯ ಮಾಡಲಾಗಿತ್ತು. ಕ್ಲಾಕ್ ಟವರ್ ಸುತ್ತ ಬಿಜೆಪಿ ಬಾವುಟ ಹಾರುತ್ತಿತ್ತು. ಶಾ ಭೇಟಿ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಂಚಾರ ವ್ಯವಸ್ಥೆಯಲ್ಲಿಯೂ ಬದಲಾವಣೆ ಮಾಡಲಾಗಿತ್ತು. ವಾಹನಗಳ ಸಂಖ್ಯೆ ಇಳಿಮುಖವಾಗಿತ್ತು. ಹಂಪನಕಟ್ಟೆ ಪ್ರದೇಶದ ಅಂಡರ್ ಪಾಸ್‌ನ ಬಾಗಿಲು ಹಾಕಿ ಮುಚ್ಚಲಾಗಿತ್ತು.