ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿಗೆ ನೈತಿಕ ಹಕ್ಕಿಲ್ಲ: ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ
Advertisement

ಬೆಂಗಳೂರು: ಕಾಂಗ್ರೆಸ್ ಪಕ್ಷದವರದ್ದು ಹೆಜ್ಜೆ ಹೆಜ್ಜೆಗೂ ಸ್ಕ್ಯಾಮ್‌ಗಳಿವೆ. ಕಾಂಗ್ರೆಸ್ಸಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನಸಭೆಯ ಅಧಿವೇಶನ ಮುಕ್ತಾಯವಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಅವರ ಭ್ರಷ್ಟಾಚಾರದ ಬಗ್ಗೆ ಪಕ್ಷದ ವತಿಯಿಂದ ಪುಸಕ್ತವನ್ನೇ ಬಿಡುಗಡೆ ಮಾಡಿದ್ದೆವು. ಅವರು ಭ್ರಷ್ಟರಾಗಿದ್ದುಕೊಂಡು ಅಭಿಯಾನ ಮಾಡುತ್ತಾರಂತೆ. ಯಾವ ಅಭಿಯಾನವನ್ನಾದರೂ ಮಾಡಲಿ, ಕೊನೆಗೆ ಸತ್ಯಕ್ಕೆ ಜಯ ಸಿಗಲಿದೆ. ಒಂದು ಸಣ್ಣ ಪುರಾವೆ ಇಲ್ಲದೆ ಮಾತನಾಡುವ ಈ ಪ್ರವೃತ್ತಿ ಬಹಳ ದಿನ ನಡೆಯುವುದಿಲ್ಲ. ಗುತ್ತಿಗೆದಾರರ ಸಂಘದ ವಿಷಯದಲ್ಲಿ ಈಗಾಗಲೇ ಉತ್ತರ ನೀಡಲಾಗಿದೆ. ಒಂದು ವಿಚಾರವನ್ನು ಪದೇ ಪದೆ ಹೇಳಿದರೆ ಅದು ಸತ್ಯವಾಗುವುದು ಎಂದು ಕಾಂಗ್ರೆಸ್ ತಿಳಿದುಕೊಂಡಂತಿದೆ. ಆ ಕಾಲ ಹೋಗಿದೆ. ಜನಕ್ಕೆ ಸತ್ಯ ಏನೆಂದು ತಿಳಿದಿದೆ. ಒಂದು ವರ್ಷದ ಹಿಂದೆ ಸಂಘ ಪತ್ರ ಬರೆದಿದೆ. ಒಂದು ಸಣ್ಣ ದೂರು ದಾಖಲಿಸಿ ಅದಕ್ಕೆ ಸೂಕ್ತ ದಾಖಲೆಗಳನ್ನು ಕೊಡಬೇಕು. ಎಲ್ಲೆಲ್ಲಿ ಕೊಟ್ಟಿದ್ದೀರಿ, ಅಥವಾ ಎಲ್ಲಿ ಕೊಡಲು ಒತ್ತಡ ಬಂದಿತ್ತು, ಯಾವ ಇಲಾಖೆ, ಯಾರಿಗೆ, ಯಾರು ಮಾತನಾಡಿದ್ದರು ಎಂಬ ಬಗ್ಗೆ ಸಣ್ಣ ದೂರು ನೀಡಿದರೆ, ಅದರ ಬಗ್ಗೆ ತನಿಖೆಗೆ ಆದೇಶಿಸಲಾಗುವುದು ಹಾಗೂ ಲೋಕಾಯುಕ್ತಕ್ಕೆ ನೇರವಾಗಿ ಪ್ರಕರಣವನ್ನು ವಹಿಸಲಾಗುವುದು ಎಂದರು.