ಬೆಂಗಳೂರು: ಅಕ್ರಮ ಹಾಗೂ ಭ್ರಷ್ಟಾಚಾರಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್ ಎನ್ನುವುದು ಇಡೀ ರಾಷ್ಟ್ರಕ್ಕೆ ತಿಳಿದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹರ್ಷಕಲಾ – ರಾಷ್ಟ್ರೀಯ ಕೈಮಗ್ಗ ಮೇಳ 2023ನ್ನು ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಮತದಾರರ ಓಲೈಕೆಗೆ ಅಕ್ರಮ ಎಸಗುತ್ತಿರುವ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರು ಬಿಜೆಪಿ ಮುಖಂಡರ ವಿರುದ್ಧ ನಗರದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಎಷ್ಟು ತಳಮಟ್ಟಕ್ಕೆ ಹೋಗಿದೆ ಎನ್ನಲು ಇದು ಉದಾಹರಣೆ. ಯಾರು ಯಾರು ಹೇಳಿಕೆ ಕೊಡುತ್ತಾರೆ, ಅದಕ್ಕೆ ಸ್ಪಷ್ಟೀಕರಣ ಹಾಗೂ ಉತ್ತರವನ್ನೂ ಕೊಡುತ್ತಾರೆ. ಕಾಂಗ್ರೆಸ್ ಪಕ್ಷದವರು ಮಹಿಳೆಯರಿಗೆ ಎರಡು ಸಾವಿರ ರೂ.ಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ. ಉಚಿತ ವಿದ್ಯುತ್ ನೀಡುವುದಾಗಿಯೂ ಘೋಷಿಸಿದ್ದು, ಪ್ರತಿದಿನ ಒಂದೊಂದು ಘೋಷಣೆ ಮಾಡುತ್ತಿದ್ದಾರೆ. ಈ ಮಾನದಂಡ ಹಾಕಿದರೆ ಅವರೂ ಕೂಡ ಅಪರಾಧಿಗಳಾಗುವುದಿಲ್ಲವೇ? ಅವರೂ ಕೂಡ ಮತದಾರರಿಗೆ ಆಸೆ, ಆಮಿಷಗಳನ್ನು ನೀಡುತ್ತಿಲ್ಲವೇ? ಎಂದು ಪ್ರಶ್ನಿಸಿದರು.