ಭುವನೇಶ್ವರಿ ರಥಯಾತ್ರೆಗೆ ಅದ್ಧೂರಿ ಸ್ವಾಗತ

ಕನ್ನಡದ ತೇರು
Advertisement

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಾರ್ಥವಾಗಿ ರಾಜ್ಯದಲ್ಲಿ ಸಂಚರಿಸಿದ್ದ ಕನ್ನಡದ ತೇರು ಗುರುವಾರ ಹಾವೇರಿ ತಲುಪಿದ್ದು, ಕನ್ನಡಾಭಿಮಾನಿಗಳು, ಶಾಲಾ ಮಕ್ಕಳು, ವಿವಿಧ ಸಂಘ ಸಂಸ್ಥೆಗಳು ಅದ್ಧೂರಿಯಾಗಿ ಸ್ವಾಗತಿಸಿದವು.
ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕನ್ನಡ ತಾಯಿ ಭುವನೇಶ್ವರಿ ರಥಯಾತ್ರೆಗೆ ಪೂಜೆ ಸಲ್ಲಿಸಿ ಹುಕ್ಕೇರಿ ಹಿರೇಮಠದ ಸದಾಶಿವ ಶ್ರೀಗಳ ನೇತೃತ್ವದಲ್ಲಿ ಸ್ವಾಗತಿಸಲಾಯಿತು.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ಕನ್ನಡಾಭಿಮಾನ ಮೆರೆದರು. ಡೊಳ್ಳು, ಸಮಾಳ, ಹಲಗೆ ಸೇರಿದಂತೆ ವಿವಿಧ ವಾದ್ಯ ಮೇಳಗಳ ಸಂಭ್ರಮದ ನಡುವೆ ತಾಯಿ ಭುವನೇಶ್ವರಿ ಮೆರವಣಿಗೆ ನಡೆಯಿತು.
ಮಹಿಳೆಯರು, ಸಂಘ-ಸಂಸ್ಥೆಗಳು ಮುಖಂಡರು, ಕನ್ನಡಪರ ಸಂಘಟನೆಯವರು ಕೈಯಲ್ಲಿ ಕನ್ನಡ ಬಾವುಟ ಹಿಡಿದು ತಾಯಿ ಭುವನೇಶ್ವರಿಗೆ ಜೈಕಾರ ಹಾಕಿದ್ದು ಹಾವೇರಿಯ ಸಾಹಿತ್ಯ ಸಮ್ಮೇಳನಕ್ಕೆ ಮೆರಗು ನೀಡಿದಂತಾಗಿತ್ತು.
ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಮಾರ್ಗಗಳಲ್ಲಿ ಸಾಗಿತು. ಶುಕ್ರವಾರ ಬೆಳಗ್ಗೆ ನಡೆಯುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಸಮ್ಮೇಳನ ಸ್ಥಳಕ್ಕೆ ಸಾಗಲಿದೆ.