ಹಾಸನ: ಲಾರಿ-ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಆರು ಜನ ಸಾವನ್ನಪ್ಪಿರುವ ದಾರುಣ ಘಟನೆ ನಗರದ ಹೊರವಲಯದ ಈಚನಹಳ್ಳಿ ಬಳಿ ನಡೆದಿದೆ.
ಈಚನಹಳ್ಳಿಯ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವೇಗವಾಗಿ ಹೋಗುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ಲೇನ್‌ಗೆ ಹಾರಿ ಕಂಟೇನರ್ ಲಾರಿಗೆ ಗುದ್ದಿದೆ. ಅಪಘಾತದಲ್ಲಿ ಇಬ್ಬರು ಮಹಿಳೆಯರು, ಮೂವರು ಪುರುಷರು ಮತ್ತು ಒಂದು ಮಗು ಸೇರಿ ೬ ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ನಾರಾಯಣಪ್ಪ, ಸುನಂದಾ, ರವಿಕುಮಾರ್, ನೇತ್ರ, ಚೇತನ್ ಮತ್ತು ಕಾರು ಚಾಲಕ ರಾಕೇಶ್ ಮೃತ ದುರ್ದೈವಿಗಳು.
ಘಟನೆ ನಡೆದ ಸಂಬಂಧ ಮೃತ ನಾರಾಯಣಪ್ಪ ಸಂಬಂಧಿ ಶ್ರೀನಿವಾಸ್ ಮಾತನಾಡಿ, ನಾರಾಯಣಪ್ಪ ಪಾರ್ಶ್ವವಾಯುಗೆ ತುತ್ತಾದ ಹಿನ್ನೆಲೆಯಲ್ಲಿ ಮದ್ದು ತೆಗೆದುಕೊಂಡು ಬರಲು ಕುಟುಂಬಸ್ಥರು ಮಂಗಳೂರಿಗೆ ಹೋಗಿದ್ದರು. ಬಾಡಿಗೆ ಕಾರು ಮಾಡಿ ಮೊನ್ನೆ ರಾತ್ರಿ ಕಳುಹಿಸಲಾಗಿತ್ತು. ವಾಪಸ್ ಬರುವಾಗ ದುರ್ಘಟನೆ ನಡೆದಿದೆ ಎಂದು ಹೇಳಿದ್ದಾರೆ.