ಭಾವೈಕ್ಯವೆಂಬುದು ಭಾಷಣದ ಮಾತಲ್ಲ
ಭಾವೈಕ್ಯತೆ ಘೋಷಣೆಯ ಕಥೆಯಲ್ಲ
ಭಾವೈಕ್ಯತೆಯಿಂ ಶೋಷಣೆಯು ಮತ್ತಿಲ್ಲ
ಹೃದಯ ಹೃದಯ ಸಂಗಮವೇ ಭಾವೈಕ್ಯತೆ
ಮಾನವ ಧರ್ಮಕೆ ಗೆಲುವು ಬಯಸುವ ಮುನ್ನ
ಮೇಲು ಕೀಳುತನ ಬಿಡಬೇಕಯ್ಯ
ತಾರತಮ್ಯವ ತೊರೆದು ಧೀರತನದಿಂ
ಸರ್ವಸಮಾನತೆ ಬೀರಬಲ್ಲೊಡೆ ಭಾವೈಕ್ಯತೆ
ಬೆಳೆಯಬಲ್ಲದು ನೋಡಾ ಮೃಡಗಿರಿ ಅನ್ನದಾನೀಶ
ವೀರಶೈವ ಧರ್ಮವು ಭಾವೈಕ್ಯತೆಯ ಸಂಕೇತ ಇದು ಭಾವೈಕ್ಯತೆ ಬೆಳಗುವ ವಿಶಿಷ್ಠ ಧರ್ಮ. ಕೆಲವರಿಂದು ಭಾವೈಕ್ಯತೆಯ ಬಗೆಗೆ ಭಾಷಣ ಮಾಡುವರು ಘೋಷಣೆಗೈವರು. ಆದರೆ ಅದು ಇವೆರಡರಿಂದ ಮುಕ್ತವಾಗಿದೆ. ಭಾವೈಕ್ಯತೆಯನ್ನು ಪರಿಪಾಲಿಸಿದರೆ ಶೀಷಣೆ ಅಲ್ಲಿಲ್ಲ. ಹೃದಯ ಹೃದಯಗಳ ಸಂಗಮವಾದರೆ ಅದು ಭಾವೈಕ್ಯತೆ ಪರಸ್ಪರರು ವ್ಯಕ್ತಿ ಗೌರವ ನೀಡಬೇಕು. ಮೇಲು ಕೀಳೆಂಬ ಭಾವ ಬರಬಾರದು, ಪಾರಮೇಶ್ವಗಾಮ ಪ್ರತಿಪಾದಿಸಿದಂತೆ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಮತ್ತಿತರ ಯಾವ ಮನುಷ್ಯನೇ ಆಗಲಿ. ಬಾಲಕ ವೃದ್ಧ ತರುಣರೇ ಇಲಿ. ವ್ಯಭಿಚಾರಿ ಸೂಳೆಯರೇ ಇರಲಿ ಯಾವುದೇ ತಪ್ಪು ಮಾಡಿದವರಿರಲಿ ಸದ್ಗುರುವಿನಿಂದ ಶಿವದೀಕ್ಷೆ ಹೊಂದಿ ಇಷ್ಟ ಲಿಂಗ ಧಾರಣ ಮಾಡಿಕೊಂಡರೆ ಅವನು ಶಿವ ಸ್ವರೂಪಿಯಾಗುವನೆಂಬುದನ್ನು ಬಸವಣ್ಣನವರು ಸಹ ಅಧ್ಯಯನ ಮಾಡಿದರು. ಅದನ್ನು ಕಾರ್ಯರೂಪಕ್ಕೆ ತಂದೆರೆಂಬುದು ಸ್ಪಷ್ಟವಾಗುತ್ತದೆ.
ಲಿಂಗಧಾರಣೆ ಮಾಡಿಕೊಂಡು ಲಿಂಗಾಂಗ ಸಾಧನೆ ಮಾಡುವದರಿಂದ ಧಾರ್ಮಿಕ ಸ್ವಾತಂತ್ರ್ಯ ಲಭಿಸುವದು ಇದಕ್ಕೆ ಲಿಂಗಾಚಾರವೆನ್ನುವರು. ಲಿಂಗಧಾರಿಯಾದವನು ದುಡಿದುಣ್ಣುವ ಧೀರನಾಗಿರಬೇಕು. ಲಿಂಗಪೂಜಿಸುವ ಕೈ ಯಾರನ್ನು ಎಂದೂ ಬೇಡಬಾರದು ಪರಧನ, ಪರಸ್ತ್ರೀಯರನ್ನು ಬಯಸಬಾರದು ಹಿಂಸೆಯನ್ನು ಮಾಡಕೂಡದೆಂಬ ಸದಸಾಚಾರವನ್ನು ಮೈಗೂಡಿಸಿಕೊಳ್ಳಬೇಕು. ಇದರಿಂದ ವೀರಶೈವನಲ್ಲಿ ಸತ್ಯ ಶುದ್ಧತೆ ಪವಿತ್ರ ಭಾವನೆ ಬೆಳೆಯುವದು ಹೀಗೆ ಶಿವಭಕ್ತರಾದವರ ಪೂರ್ವಾಶ್ರಯವನ್ನು ಎತ್ತಿ ತೋರಿಸಿಸದೇ ಸಮಾನರೆಂಬ ಭವವನ್ನು ಬೆಳೆಸಿಕೊಳ್ಳಬೆಕಾಗುವದು. ಇದನ್ನೇ ಬಸವಮಹಾನುಭಾವರು ಇವನಾರವ ಇವನಾರವನೆಂದೆನಿಸದಿರಯ್ಯ ಇವನಮ್ಮವ ಇವನಮ್ಮವ ಇವನಮ್ಮವನೆಂದೆನಿಸಯ್ಯ ಎಂದು ಚವನಿಸಿದ್ದುಂಟು. ಎಲ್ಲ ಕಾಯಕದವರನ್ನು ಆತ್ಮೀಯ ಭಾವದಿಂದ ಕಂಡರು.ಭಾವೈಕ್ಯತೆಯನ್ನು ಸಾಧಿಸಿದ ಪರಿಣಾಮವಾಗಿಯೇ ನಾಡಿನುದ್ದಗಲದಿಂದ ಅನೇಕ ಶಿವಶರಣರು ಕಲ್ಯಾಣದಲ್ಲಿ ಸೇರುವಂತಾಗಿದ್ದು, ಸಮಾನತೆಯ ಭವ್ಯ ಸಮಾಜದ ಪರಿಕಲ್ಪನೆ ಮೂಡಲು ಸಾಧ್ಯವಾಯಿತು.