ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಜೋರಾಗಿ ಸುರಿದ ಮಳೆಗೆ ಬೃಹತ್ ಗಾತ್ರದ ಮರವೊಂದು ರಸ್ತೆಬದಿ ನಡೆದು ಹೋಗುತ್ತಿದ್ದ ಮಹಿಳೆಯ ಮೇಲೆ ಬಿದ್ದಿದ್ದು, ಮರದ ಅಡಿ ಸಿಲುಕಿದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಸವಿತಾ(೪೮) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಎನ್‌ಆರ್‌ಪುರ ತಾಲೂಕಿನ ಕಟ್ಟಿಮನಿ ಗ್ರಾಮದ ಬಳಿ ಘಟನೆ ನಡೆದಿದೆ.
ಇದೇ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಕಾರಿನ ಮೇಲೂ ಮರ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಮರ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳೀಯರು ಗಾಯಾಳುಗಳ ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಎನ್.ಆರ್. ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇನ್ನೂ ಮಳೆಯ ಅವಾಂತರಕ್ಕೆ ಜನರು ಕಂಗಲಾಗಿದ್ದಾರೆ.