ಒಂದು ವ್ಯವಸ್ಥೆಯಲ್ಲಿ ಇರುವವರಿಗೆ ಮತ್ತು ಅದರಾಚೆ ಸುತ್ತಲೂ ಇರುವವರಿಗೆ ಆ ವ್ಯವಸ್ಥೆಯ ಬಗೆಗೆ ವಿಶ್ವಾಸ ಇರಬೇಕಾದ ಅವಶ್ಯಕತೆ ಇದೆ. ಆ ವಿಶ್ವಾಸಾರ್ಹತೆಯು ಕಣ್ಣಿಗೆ ಎದ್ದು ಕಾಣುವಂತೆಯೂ, ಪ್ರತಿಯೊಬ್ಬರೂ ಅನುಭವಿಸುವಂತಹದೂ ಮತ್ತು ವೈರಿಗಳೂ ಕೂಡ ಒಪ್ಪುವಂತಹುದಾಗಿರಬೇಕು. ಅಂದರೆ ಪರಸ್ಪರ ವಿಶ್ವಾಸ, ಪಾರದರ್ಶಕತೆ, ನ್ಯಾಯನಿಷ್ಠುರತೆ, ಎಲ್ಲರಿಗೂ ಸಮಾನವಾದ ವಿಚಾರಣೆ ಮತ್ತು ಆಚರಣೆಗಳು ಸಹಜವೆನ್ನುವಂತೆ ನಡೆಯುತ್ತಿರಬೇಕು. ಅದರಲ್ಲೂ ವಿಶೇಷವಾಗಿ ನ್ಯಾಯದಾನದ ವ್ಯವಸ್ಥೆಯಲ್ಲಿ ಪ್ರತಿಶತ ನೂರರಷ್ಟು ನಂಬಿಕೆ ಇರಬೇಕಾದದ್ದು ಅತ್ಯವಶ್ಯ. ಸ್ವಜನ ಪಕ್ಷಪಾತ, ಜಾತಿ, ಮತ, ಪಂಥ, ಭಾಷೆ, ಪ್ರದೇಶ, ಲಿಂಗ, ಶೈಕ್ಷಣಿಕ/ಸಾಮಾಜಿಕ ಹಿನ್ನೆಲೆ ಅಂತಸ್ತು ಹೀಗೆ ನಾನಾ ವಿಧ ತಾರತಮ್ಯಗಳ ಪ್ರಭಾವಕ್ಕೊಳಗಾಗದೇ ವಸ್ತುನಿಷ್ಠವಾಗಿ, ನಿರ್ಬಿಢೆಯಿಂದ ಯಾರದೇ ಮುಲಾಜಿಲ್ಲದೇ, ಸತ್ಯಸ್ಯ ಸತ್ಯವನ್ನು ಹೇಳಿದಾಗ ಪ್ರತಿಯೊಬ್ಬರಿಗೂ ಆ ವ್ಯವಸ್ಥೆಯ ಬಗ್ಗೆ ವಿಶ್ವಾಸವೂ, ಗೌರವಾಭಿಮಾನಗಳೂ ಹೆಚ್ಚುತ್ತವೆ.
ಭಾರತೀಯ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳು ಆಗಾಗ ಕೊಡುವ ವಿಶೇಷ ತೀರ್ಪುಗಳು ನಿಜಕ್ಕೂ ಭಾರತೀಯ ನ್ಯಾಯದಾನ ವ್ಯವಸ್ಥೆ ಬಗೆಗೆ ಹೆಮ್ಮೆಪಡುವಂತೆ ಮಾಡುತ್ತವೆ. ಅಂತಹ ಕೆಲವು ಉದಾಹರಣೆಗಳು ಹೀಗಿವೆ.
ನೌಕರನಿಗೆ ನೌಕರಿ ಕೊಟ್ಟ ಮಾತ್ರಕ್ಕೆ ಮಾಲೀಕ/ಕಂಪನಿ ಅವನನ್ನು ಕೀಳಾಗಿ ಕಾಣಬೇಕಿಲ್ಲ. ದುಡಿಯುವನು ಕಡಿಮೆ, ದುಡಿಸಿಕೊಳ್ಳುವವನು ಹೆಚ್ಚು ಎನ್ನುವ ಹಾಗಿಲ್ಲ. ದುಡಿಯುವನು ದುಡಿಯದಿದ್ದರೆ ದುಡಿಸಿಕೊಳ್ಳುವನಿಗೆ ದುಡಿಮೆ ಇಲ್ಲ! ದುಡಿಯುವವನಿಗೆ ದುಡಿಮೆ ಹೇಗೆ ಮುಖ್ಯವೋ ಹಾಗೆಯೇ ದುಡಿಸಿಕೊಳ್ಳುವನಿಗೆ ದುಡಿಯುವವನೂ ಅಷ್ಟೇ ಮುಖ್ಯ. ಇವೆರಡೂ ಪರಸ್ಪರ ಪೂರಕವಾಗಿರಬೇಕು. ಆದರೆ ಸಂಬಳ ಕೊಡುವವನ ಕೈ ಮೇಲೆ, ಪಡೆದುಕೊಳ್ಳುವವನ ಕೈ ಕೆಳಗೆ! ಎನ್ನುವ ಮಾತೊಂದಿದೆ. ಇದು ತೀರಾ ಹಳೆಯ ಮಾತು. ಈಗ ಏನಿದ್ದರೂ ದುಡಿಯುವನಿದ್ದರೆ ದುಡಿಸಿಕೊಳ್ಳುವವನಿಗೆ ಕಾಲ. ಆದರೆ ಕೆಲವರು ಕೆಲಸಗಾರರನ್ನು ಗೌರವದಿಂದ ಕಾಣದೇ ತುಚ್ಚವಾಗಿ ನಡೆದುಕೊಳ್ಳುತ್ತಾರೆ. ಅವರನ್ನು ಗುಲಾಮರಂತೆ ಕಾಣುತ್ತಾರೆ. ಈ ಕುರಿತು ಇತ್ತೀಚೆಗೆ ಕರ್ನಾಟಕ ಉಚ್ಚ ನ್ಯಾಯಾಲಯವು ನೌಕರರು ಸರಕಾರದ ಗುಲಾಮರಲ್ಲ'' ಎಂದು ಚಾಟಿ ಬೀಸಿದೆ.
ನಮ್ಮ ವ್ಯವಸ್ಥೆ ಈಸ್ಟ್ ಇಂಡಿಯಾ ಕಂಪನಿ ಅಲ್ಲ” ಎಂದು ಲೋಕಾಯುಕ್ತ ಪೊಲೀಸರಿಗೆ ತಿವಿದಿದೆ. ಸರಕಾರಿ ಸೇವೆಯಲ್ಲಿರುವ ನೌಕರದಾರರ ವಿರುದ್ಧ ದುರುದ್ದೇಶದಿಂದ ಆರೋಪಗಳ ವಿಚಾರಣೆ ನಡೆಸುವಾಗ ಇಲಾಖೆಗಳು ಪಾರದರ್ಶಕ ಮತ್ತು ಮಾನವೀಯ ನಡತೆ ಹೊಂದಿರಬೇಕು ಎಂದೂ ಹೇಳಿದೆ. ನಿಯಮದಂತೆ ಶುಲ್ಕ ಪಡೆದುದ್ದಕ್ಕೆ ಲಂಚದ ಆರೋಪ ಮಾಡುವುದು ಸರಿಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ದುರುದ್ದೇಶದಿಂದ ನೌಕರರನ್ನು ಪ್ರಕರಣದಲ್ಲಿ ಸುಮ್ಮ ಸುಮ್ಮನೇ ದ್ವೇಷದಿಂದ ಸಿಲುಕಿಸಿ ತೊಂದರೆ ಕೊಡುವುದು ಕೂಡದು. ಪ್ರಕರಣದ ನೆಪದಲ್ಲಿ ಅವರ ಸಂಬಳ, ಪಿಂಚಣಿ ಮತ್ತು ಕಾನೂನು ಪ್ರಕಾರ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ತಡೆಹಿಡಿಯುವುದು ತಪುö್ಪ ಎಂದು ಹೇಳಿದ ಕೋರ್ಟು ತಕ್ಷಣ ಆ ಎಲ್ಲಾ ಸೌಕರ್ಯಗಳನ್ನು ನೌಕರನಿಗೆ ಒದಗಿಸಲು ಆಜ್ಞಾಪಿಸಿದೆ.
ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಅವರೆಷ್ಟೇ ಪ್ರಭಾವೀಗಳಾಗಿದ್ದರೂ, ಯಾವುದೇ ಅಧಿಕಾರದಲ್ಲಿದ್ದರೂ ಹಣವಂತರಾಗಿದ್ದರೂ ಸರಿಯೇ. ತಪ್ಪು ಎಸಗಿದ್ದರೆ, ಅಪರಾಧಿಯಾಗಿದ್ದರೆ ಅವರು ಶಿಕ್ಷೆಯನ್ನು ಅನುಭವಿಸಲೇಬೇಕು. ಮಾಜಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ, ಪಿ.ವಿ. ನರಸಿಂಹರಾವ್ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ಅವರನ್ನು ನ್ಯಾಯಾಲಯದ ಆಜ್ಞೆಯಂತೆ ಬಂಧಿಸಲಾಗಿತ್ತು. ತೀರ ಇತ್ತೀಚಿಗೆ ಮೊಕದ್ದಮೆಯೊಂದರಲ್ಲಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಬ್ಬರು ಸಚಿವರಿಗೆ ನ್ಯಾಯಾಲಯ ರೂ.೧೦,೦೦೦ ದಂಡವನ್ನು ಹಾಕಿದೆ. ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ರಿಗೆ ಸಮನ್ಸ್ ನೀಡಿದೆ. ಜನಪ್ರತಿನಿಧಿಗಳಾದವರು ತಾವು ಮೊದಲು ಕಾನೂನು ಪಾಲಿಸಿ ಸಾರ್ವಜನಿಕರಿಗೆ ಅನುಕರಣೀಯರಾಗಬೇಕು. ತಾವೇ ಮಾಡಿದ ಕಾನೂನುಗಳನ್ನು ತಾವೇ ಮುರಿಯಬಾರದು. ಕಾನೂನಿಗೆ ತಲೆಬಾಗಿ ಇತರರಿಗೆ ಆದರ್ಶ ಪ್ರಾಯರಾಗಿರಬೇಕೆಂದು ಆ ಮೂಲಕ ಕೋರ್ಟು ಸಂದೇಶವನ್ನು ಸಾರಿದೆ.
ಸರಕಾರಿ ನೌಕರರು, ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರ ವೈಯಕ್ತಿಕ ವಿವರಗಳನ್ನು ಕೇಳಿ ಆರ್‌ಟಿಐ ಅರ್ಜಿಗಳನ್ನು ಅನೇಕರು ಹಾಕುತ್ತಾರೆ. ತಮಗೆ ಸಂಬಂಧಿಸಿರದ ಮಾಹಿತಿಯನ್ನು ಕೇಳುತ್ತಾರೆ. ಆ ಮೂಲಕ ಬೆದರಿಕೆ ಹಾಕುವ, ಬ್ಲಾಕ್ಮೇಲ್ ಮಾಡುವ, ಕಿರಿಕಿರಿ ಉಂಟು ಮಾಡುವ ತಂತ್ರ ಅವರದು. ಇನ್ನೂ ಕೆಲವರು ತಮ್ಮ ಸ್ವಾರ್ಥಕ್ಕಾಗಿ ದ್ವೇಷ ಸಾಧಿಸಲು ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಮೊಕದ್ದಮೆಯನ್ನು ಹೂಡುತ್ತಾರೆ. ಯಾವುದೇ ಸಾರ್ವಜನಿಕ ಆಸಕ್ತಿ ಅವರಲ್ಲಿ ಇಲ್ಲದಿದ್ದಾಗ ಅದು ಕೋರ್ಟಿನ ಪ್ರತಿವಾದಿಗಳ ಕಾಲಹರಣ, ಧನ ಹರಣಕ್ಕೆ ಕಾರಣವಾಗುತ್ತದೆ. ಈ ರೀತಿಯ ಉಢಾಪೆ ಮಾಡುವವರಿಗೆ ಕೋರ್ಟು ಛೀಮಾರಿ ಹಾಕಿ, ದಂಡಿಸಿದ ಉದಾಹರಣೆಗಳು ಬಹಳಷ್ಟು ಇವೆ. ಹೊರನೋಟಕ್ಕೇ ಸಾಬೀತು ಪಡಿಸಲಾಗದ ಆರೋಪಗಳನ್ನು ಮಾಡಿದ ಸುಳ್ಳು ದಾವೆದಾರರನ್ನು ಕೋರ್ಟು ಎಚ್ಚರಿಸುತ್ತಿರುತ್ತದೆ. ಇತ್ತೀಚೆಗೆ ತಾನೇ ಕೊಟ್ಟ ತೀರ್ಪಿನಲ್ಲಿ ಕೋರ್ಟು ಪಿಐಎಲ್ ಹಾಕುವವರು ನೈತಿಕ ಹಿನ್ನೆಲೆಯನ್ನು ಉಳ್ಳವಾಗಿರಬೇಕು ಎಂದು ಹೇಳಿದೆ. ಹಲವು ಹಗರಣಗಳಲ್ಲಿ ಸಿಲುಕಿದವರ, ಶುದ್ಧಚಾರಿತ್ರ‍್ಯವಿಲ್ಲದವರ ಪಿಐಎಲ್ ಅನ್ನು ಪರಿಗಣಿಸಬೇಕಾಗಿಲ್ಲ.
ಅನೇಕ ಸಲ ಕೋರ್ಟಿನ ತೀರ್ಪುಗಳು ಸರಕಾರದ ವಿರುದ್ಧ ಬರುತ್ತವೆ. ದಾವೇದಾರರ ಪರವಾಗಿ ನಿರ್ಣಯ ಕೊಟ್ಟು ಅವರಿಗೆ ಪರಿಹಾರವನ್ನು, ಬಡ್ಡಿ ಸಮೇತ, ದಂಡ ಸಮೇತ ತುಂಬಲು ಆಜ್ಞೆ ಆಗಿರುತ್ತದೆ. ಆದರೆ ಕೋರ್ಟಿನ ಆಜ್ಞೆಯನ್ನು ಉಪೇಕ್ಷಿಸಿ ಪಾಲಿಸದ ಸರಕಾರದ ಅಂದರೆ ದಾವೆಗೆ ಸಂಬಂಧಪಟ್ಟ ಕಚೇರಿಯ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲು, ಎಸಿ/ಡಿಸಿ ಕಚೇರಿಯ ವಸ್ತುಗಳನ್ನು ವಶಪಡಿಸಿಕೊಳ್ಳಲು ಆಜ್ಞೆ ನೀಡಿದ ಅನೇಕ ಉದಾಹರಣೆಗಳಿವೆ. ನ್ಯಾಯಾಲಯ ನಿಂದನೆಯ ಪ್ರಕರಣಗಳನ್ನು ಕೋರ್ಟುಗಳು ಯಾವಾಗಲೂ ಗಂಭೀರವಾಗಿಯೇ ತೆಗೆದುಕೊಳ್ಳುತ್ತದೆ. ಸುಳ್ಳು ಜಾತಿ ಪ್ರಮಾಣಪತ್ರವನ್ನು ಹಾಜರು ಪಡಿಸಿ ಮೀಸಲಾತಿಯನ್ನು ಪಡೆಯುವ, ಚುನಾವಣೆಗಳಲ್ಲಿ ಸ್ಪರ್ಧಿಸುವ ಮತ್ತು ಹುದ್ದೆ/ಅಧಿಕಾರ/ಪದೋನ್ನತಿಯನ್ನು ಪಡೆಯುವ ವರಿಗೂ ನ್ಯಾಯಾಲಯ ಚಾಟಿಯೇಟು ಬೀಸಿದೆ. ಚುನಾವಣೆ ಆಯೋಗಕ್ಕೆ ಕೂಡ ನ್ಯಾಯಾಲಯವು ಮುಕ್ತ ಮತ್ತು ದೋಷರಹಿತ ಚುನಾವಣೆಗಳನ್ನು ನಡೆಸಲು ಆಗಾಗ ಸೂಚನೆ/ನಿರ್ದೇಶನಗಳನ್ನು ನೀಡುತ್ತಿರುತ್ತದೆ. ಇತ್ತೀಚೆಗೆ ಚಂಡಿಗಡ ಮೇಯರ್ ಚುನಾವಣೆಯಲ್ಲಿ ಮತಪತ್ರಗಳನ್ನು ವಿರೂಪಗೊಳಿಸಿದ ಪ್ರಕರಣದಲ್ಲಿ ಚುನಾವಣಾಧಿಕಾರಿಯ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲು ಆದೇಶಿಸಿದ ನ್ಯಾಯಾಲಯ ಅಂತಿಮ ತೀರ್ಪು ಬರುವ ವರೆಗೆ ಸಭೆಯನ್ನು ನಡೆಸದಂತೆ ಮಹಾನಗರ ಸಭೆಗೆ ತಡೆ ನೀಡಿದೆ. ಇಂದು ದೇಶದ ವ್ಯವಸ್ಥೆಯಲ್ಲಿ ಜನರಿಗೆ ನಂಬಿಕೆ ಉಳಿಯಲು ಈ ತೆರನಾದ ನಿಷ್ಪಕ್ಷಪಾತ ಧೋರಣೆಗಳೇ ಕಾರಣ. ಅಧಿಕಾರಸ್ಥರಿಗೆ, ಹಣವಂತರಿಗೆ, ಬಲವಂತರಿಗೆ ಅಳುಕದೇ ಸದಾ ನ್ಯಾಯದ ಪರವಾಗಿ ನಿಂತಿರುವುದೇ ಇದಕ್ಕೆ ಕಾರಣ. ನ್ಯಾಯ ಎಲ್ಲರಿಗೂ ಒಂದೇ. ಸತ್ಯಮೇವ ಜಯತೆ ಎನ್ನುವ ಧೋರಣೆಯೇ ಕಾರಣ. ತಡವಾಗಿಯಾದರೂ ಚಿಂತೆಯಿಲ್ಲ ನ್ಯಾಯಕ್ಕೆ ಜಯ ಸಿಗುತ್ತದೆ ಎನ್ನುವ ವಿಶ್ವಾಸ ಜನರದು. ಎಲ್ಲರೂ ಕೈ ಬಿಟ್ಟರೂ ನಿರಾಶರಾಗಬೇಕಿಲ್ಲ. ನಮ್ಮ ಅಳಲು ತೋಡಿಕೊಳ್ಳಲು ದೇವರ ಸಮನಾಗಿ ನ್ಯಾಯಾಧೀಶರೊಬ್ಬರಿದ್ದಾರೆ ಎನ್ನುವ ಖಾತ್ರಿ ಅವರಿಗಿದೆ.