ಬೆಂಗಳೂರು: ಗಣರಾಜ್ಯೋತ್ಸವ ದಿನದಂದು ನಮ್ಮನ್ನು ಸಂವಿಧಾನಕ್ಕೆ ಸಮರ್ಪಣೆ ಮಾಡಿಕೊಂಡು ಸಂವಿಧಾನಬದ್ಧವಾಗಿ ನಡೆದು ಭಾರತದ ಪ್ರಗತಿಗೆ ಸಂಕಲ್ಪ ಮಾಡಿಕೊಳ್ಳುವ ದಿನ. ನಾವೆಲ್ಲಾರೂ ಆ ಸಂಕಲ್ಪವನ್ನು ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಅವರು ಇಂದು ನ್ಯಾಷನಲ್ ಮಿಲಿಟರಿ ವಾರ್ ಮೆಮೋರಿಯಲ್ ಬಳಿ “ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಗಣರಾಜ್ಯೋತ್ಸವದ ಶುಭಾಶಯಗಳನ್ನು ನಾಡಿನ ಜನತೆಗೆ ತಿಳಿಸಿದ ಮುಖ್ಯಮಂತ್ರಿಗಳು ವಿಶ್ವಕ್ಕೇ ಭಾರತದ ವಿಸ್ತೃತವಾಗಿರುವ ಶಕ್ತಿ, ಭಾರತದ ಭವ್ಯ ಪರಂಪರೆ ಸದಾ ಕಾಲ ಪ್ರತ್ಯೇಕವಾಗಿ, ವಿಭಿನ್ನವಾಗಿ ಜಗತ್ತಿನಲ್ಲಿದೆ. ಆಧುನಿಕ, ಪ್ರಗತಿಪರವಾದ ಭಾರತ. ಮಾನವೀಯತೆಯ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ಎಂಬ ಧ್ಯೇಯ ನುಡಿಯಿಂದ ಮುನ್ನಡೆಯುತ್ತಿದ್ದೇವೆ ಎಂದರು.
ರಾಜ್ಯದ ಎಂಟು ಜನರಿಗೆ ಪದ್ಮಪ್ರಶಸ್ತಿ: ನಮ್ಮ ಹೆಮ್ಮೆ
ರಾಜ್ಯದ ಎಸ್.ಎಂ.ಕೃಷ್ಣಾ ಅವರಿಗೆ ಪದ್ಮವಿಭೂಷಣ, ಸುಧಾಮೂರ್ತಿ, ಎಸ್.ಎಲ್.ಭೈರಪ್ಪ ಸೇರಿದಂತೆ ಒಟ್ಟು ಎಂಟು ಜನರಿಗೆ ಪದ್ಮಪ್ರಶಸ್ತಿಗಳು ಘೋಷಣೆಯಾಗಿವೆ. ಕಳೆದ ಹಲವಾರು ವರ್ಷಗಳಿಂದ ಪ್ರಧಾನಮಂತ್ರಿಗಳು, ಅವರವರ ವೃತ್ತಿಯಲ್ಲಿ ಶ್ರೇಷ್ಠತೆ ಕಂಡುಕೊಂಡವರು, ದೇಶಕ್ಕೆ ಕೊಡುಗೆ ನೀಡಿದವರು, ಯಾವ ಅಪೇಕ್ಷೆಯೂ ಇಲ್ಲದೆ ಎಲೆಮರೆಕಾಯಿಯಾಗಿ ಕೆಲಸ ಮಾಡಿದವರನ್ನು ಗುರುತಿಸಿ ಪದ್ಮಪ್ರಶಸ್ತಿಗಳನ್ನು ನೀಡುವ ವಿನೂತನ ಪದ್ಧತಿಯನ್ನು ಅಳವಡಿಸಿದ್ದಾರೆ. ಇದು ಅವರ ಕಾರ್ಯವೈಖರಿ. ಗುಣಾತ್ಮಕ ಕಾರ್ಯಕ್ಕೆ ಬೆಲೆ ನೀಡಿದ್ದಾರೆ. ಕರ್ನಾಟಕಕ್ಕೆ ಎಂಟು ಪ್ರಶಸ್ತಿ ದೊರೆತಿರುವುದು ನಮ್ಮ ಹೆಮ್ಮೆ. ಕರ್ನಾಟಕದ ವಿಪುಲ ಮಾನವ ಪ್ರತಿಭೆಯನ್ನು ತೋರಿದಂತಾಗಿದೆ. ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಬಯಸುತ್ತೇನೆ. ಅವರಿಂದ ಇನ್ನಷ್ಟು ಜನರಿಗೆ ಪ್ರೇರಣೆ ದೊರೆಯುವ ಆಶಾಭಾವನೆ ಇದೆ ಎಂದರು.