ಭಾರತದ ನಾಯಕತ್ವದಲ್ಲಿ ಹೊಸ ಯುಗ ಪ್ರಾರಂಭ : ಸಿಎಂ ಬಸವರಾಜ ಬೊಮ್ಮಾಯಿ

bomai
Advertisement

ಕೊಪ್ಪಳ: ಭಾರತದ ನಾಯಕತ್ವದಲ್ಲಿ ಹೊಸ ಯುಗ ಪ್ರಾರಂಭವಾಗಿದ್ದು,2023ರ ವಿಧಾನಸಭಾ ಚುನಾವಣೆಯಲ್ಲಿ ಸಕಾರಾತ್ಮಕತೆಯಿಂದ ಮತ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಭಾರತೀಯ ಜನತಾ ಪಕ್ಷದ ವತಿಯಿಂದ ಕೊಪ್ಪಳ ದಲ್ಲಿ ಆಯೋಜಿಸಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸದೃಡ ಸಂಘಟನೆ ಜೊತೆ ಗೆ ದೇಶ ಮೊದಲು ಎಂಬುದು ಭಾಜಪದ ಉದ್ದೇಶ. ಏಕ ಭಾರತ ಶ್ರೇಷ್ಟ ಭಾರತ ಎಂದಿರುವ ಪ್ರಧಾನಿ ಮೋದಿಯವರ ನಾಯಕತ್ವ ವಿಶ್ವಮಾನ್ಯವಾದುದು. ಅದೇ ರೀತಿ ಕರ್ನಾಟಕದಲ್ಲಿ ಎಲ್ಲರೂ ಒಪ್ಪಿರುವ ನಾಯಕತ್ವ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ. ರಾಜ್ಯದ ಜನಪರ ಹಾಗೂ ರೈತಹೋರಾಟಗಳನ್ನು ಮಾಡಿ, ರೈತ ಸಮೂಹವನ್ನು ಒಗ್ಗೂಡಿಸಿ ಭಾಜಪದ ಪರ ನಿಲ್ಲುವಂತೆ ಬಿ.ಎಸ್.ಯಡಿಯೂರಪ್ಪ ಅವರು ಮಾಡಿದ್ದಾರೆ. ನರೇಂದ್ರ ಮೋದಿ, ನಡ್ಡಾ ಅವರ ನಾಯಕತ್ವದಲ್ಲಿ ಭಾರತದಲ್ಲಿ ಹೊಸ ಯುಗ ಪ್ರಾರಂಭವಾಗಿದೆ. ಸಕಾರಾತ್ಮಕ ರಾಜಕಾರಣದಿಂದ ದೇಶದ ಹಾಗೂ ನಾಡಿನ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ. ಗುಜರಾತಿನ ವಿಧಾನಸಭಾ ಚುನಾವಣೆಯ ಅಭೂತಪೂರ್ವ ಗೆಲುವು ವಿಶ್ವದಾಖಲೆಯನ್ನು ಸಾಧ್ಯವಾಗಿಸಿದ್ದಾರೆ ಎಂದರು.
ಕಾಂಗ್ರೆಸ್ ಧೂಳಿಪಟವಾಗಲಿದೆ :
ನಮ್ಮ ಜನಕಲ್ಯಾಣ ಕಾರ್ಯಕ್ರಮಗಳು, ದೀನದಲಿತರ ಏಳಿಗೆಯ ಕಾರ್ಯಕ್ರಮ ಯಶಸ್ಸಿನ ಮೇಲೆ ಮತ ಪಡೆಯಲಾಗುವುದು. ಈ ಬಾರಿ ಕಾಂಗ್ರೆಸ್ ಧೂಳಿಪಟವಾಗಲಿದೆ. ಇತ್ತೀಚೆಗೆ ಒಳಮೀಸಲಾತಿ ಬಗ್ಗೆ ಸಚಿವ ಸಂಪುಟ ಉಪಸಮಿತಿ ಸರ್ಕಾರ ರಚಿಸಿದೆ. ಇದಕ್ಕೆ ಸಿದ್ದರಾಮಯ್ಯನವರು ಇದೊಂದು ಕಣ್ಣೊರೆಸುವ ತಂತ್ರವಾಗಿದ್ದು, ಕಾಂಗ್ರೆಸ್ ಗೆ ಅಧಿಕಾರವನ್ನು ನೀಡಿದರೆ ಈ ಕೆಲಸವನ್ನು ಮಾಡಲಾಗುವುದು ಎಂದರು. ಅವರು ಸಮಾವೇಶಕ್ಕೆ ಹೋಗಿ ಕೇವಲ ದೀಪ ಹಚ್ಚಿಬಂದರೇ ಹೊರತು ಮೀಸಲಾತಿ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಇದು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನ ಭಂಡತನದ ಬದ್ಧತೆ. ಸಾರ್ವಜನಿಕವಾಗಿ ಸುಳ್ಳು ಹೇಳುವಂತಹ ಪ್ರತೀತಿಯನ್ನು ಬೆಳೆಸಿಕೊಂಡಿದ್ದು, ಈಗ ಜನ ಜಾಗೃತರಾಗಿದ್ದಾರೆ ಎಂದರು.
ಕಾಂಗ್ರೆಸ್ ತಂತ್ರಗಾರಿಕೆಗೆ ಜನರು ಮರಳಾಗುವುದಿಲ್ಲ :
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುವುದಾಗಿ ಪೊಳ್ಳು ಭರವಸೆ ನೀಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮೊದಲಿಗೆ 4 ಕೆಜಿ ಅಕ್ಕಿ ನೀಡಿ, ಚುನಾವಣೆಯ ಸಂದರ್ಭದಲ್ಲಿ 7 ಕೆಜೆ ಕೊಡಲು ಪ್ರಾರಂಭಿಸಿದರು. ಆದರೆ ಈಗಾಗಲೇ ನಮ್ಮ ಸರ್ಕಾರದ 5 ಕೆಜಿ ಹಾಗೂ ಗರೀಬ್ ಕಲ್ಯಾಣ ಯೋಜನೆಯಿಂದ 5 ಕೆಜಿ, ಹೀಗೆ ಒಟ್ಟು 10 ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ. ಕಾಂಗ್ರೆಸ್ ನವರ ಅನ್ನಭಾಗ್ಯದಲ್ಲಿ ಅಕ್ಕಿ ಮೋದಿಯವರದ್ದು, ಸಿದ್ದರಾಮಯ್ಯನವರ ಚಿತ್ರದ ಚೀಲ ಮಾತ್ರ ಕಾಂಗ್ರೆಸ್ ನವರದ್ದು. ಜನರು ಇಂತಹ ತಂತ್ರಗಾರಿಕೆಗೆ ಮರಳಾಗುವುದಿಲ್ಲ ಎಂದರು.
ಕೊಪ್ಪಳದ ಅಂಜನಾದ್ರಿ ಕ್ಷೇತ್ರ ಬಹಳ ಪವಿತ್ರವಾದದ್ದು. ಕಾಂಗ್ರೆಸ್ ನವರು ಕೃಷ್ಣೆ ಕಡೆಗೆ ನಮ್ಮ ನಡಿಗೆ ಎಂದರು. ಐದು ವರ್ಷದಲ್ಲಿ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ . 50 ಸಾವಿರ ಕೋಟಿ ಅನುದಾನ ನೀಡುತ್ತೇವೆ ಎಂದವರು 5 ಸಾವಿರ ಕೋಟಿ ಅನುದಾನವನ್ನೂ ನೀಡಲಿಲ್ಲ. ಈ ಭಾಗದ ಜನರಿಗೆ ಮೋಸ ಮಾಡಲಾಗಿದೆ ಎಂದರು
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೊಳ, ಆನಂದ ಸಿಂಗ್, ಹಾಲಪ್ಪ ಆಚಾರ್, ಮತ್ತಿತರ ಮುಖಂಡರು ಹಾಜರಿದ್ದರು.