ಭಾಗೀರಥಿ ಗಂಗಾವತರಣ

Advertisement

ಜನರ ಸೇವೆಯೇ ಜನಾರ್ದನನ ಸೇವೆ ಎಂಬ ನುಡಿಗಟ್ಟಿನ ಉಗಮ ಹಾಗೂ ಆಗಮಗಳ ಪೂರ್ವಾಪರದ ಜಾಡು ಹಿಡಿಯುವುದು ಕಷ್ಟ. ಏಕೆಂದರೆ ಈಗಿನದು ಆದೇಶದ ಕಾಲ. ಪ್ರತ್ಯಕ್ಷವಾದರೂ ಪ್ರಮಾಣೀಕರಿಸಿ ನೋಡಿದರೆ ಅಷ್ಟೇ ಸತ್ಯ ಎಂಬ ಮಾತಿಗೆ ಹೆಚ್ಚು ಬೆಲೆ. ಜನ ಹಾಗೂ ಜನಾರ್ದನನ ಸೇವೆಯ ಅರ್ಥ ವ್ಯಾಪ್ತಿಗಳು ಮನವೊಲಿಕೆಯಾಗಬೇಕಾದರೆ ಉತ್ತರಕನ್ನಡ ಜಿಲ್ಲೆಯ ಶಿರಸಿ ಹೊರವಲಯದ ಗಣೇಶನಗರದ ಅಂಗನವಾಡಿ ಕೇಂದ್ರದ ಬಳಿ ಗೌರಿನಾಯ್ಕ ಎಂಬ ಮಹಿಳೆ ಛಲಬಿಡದೇ ಬಾವಿ ತೋಡಿ ನೀರು ಜನರ ಬಳಕೆಗೆ ಸಿಗುವಂತೆ ಮಾಡಿರುವ ಪವಾಡಸದೃಶ ಬೆಳವಣಿಗೆಯೊಂದೇ ಸಾಕು. ಜನ ಹಾಗೂ ಜನಾರ್ದನನ ಸೇವೆಯ ತತ್ತ್ವ ಮಹತ್ವದ ಉಗಮ ಮತ್ತು ಆಗಮವನ್ನು ಕಂಡರಸಲು. ಭಗೀರಥ ಮಾಡಿದ ಪ್ರಯತ್ನದಂತೆ ಗೌರಿನಾಯ್ಕ ಅಂಗನವಾಡಿ ಮಕ್ಕಳ ನೀರಿನ ಅಗತ್ಯವನ್ನು ಪೂರೈಸಲು ನಲವತ್ತು ಅಡಿ ಆಳದ ಬಾವಿಯನ್ನು ಏಕಾಂಗಿಯಾಗಿ ತೋಡಿ ಯಶಸ್ವಿಯಾಗಿರುವ ಬೆಳವಣಿಗೆ ನೋಡಿದಾಗ ಜನನಾಯಕರ ಹೊಸ ಮಾದರಿ ಏನೆಂಬುದು ಲೋಕಕ್ಕೆ ಗೊತ್ತಾಗುತ್ತದೆ. ಸ್ವಾರ್ಥದ ಲವಲೇಶವೂ ಇಲ್ಲದೇ ಕೇವಲ ಜನಹಿತಕ್ಕಾಗಿ ಬಾವಿಯನ್ನು ತೋಡಲು ಹೊರಟ ಗೌರಿನಾಯ್ಕ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಂದ ಸತತ ಕಿರುಕುಳಕ್ಕೆ ಒಳಗಾಗಿದ್ದಷ್ಟೇ ಅಲ್ಲದೇ ತೆರೆದ ಬಾವಿಯನ್ನು ಮುಚ್ಚಲು ಕೂಡಾ ಮುಂದಾಗಿದ್ದ ಬೆಳವಣಿಗೆ ಯಾವತ್ತಿಗೂ ಅಧಿಕಾರಶಾಹಿಗೆ ಎಚ್ಚರಿಕೆಯ ಗಂಟೆ.
ಗೌರಿನಾಯ್ಕ ಸಾಮಾನ್ಯರಲ್ಲಿ ಸಾಮಾನ್ಯ ಮಹಿಳೆ. ಓದಿನ ವಿಸ್ತಾರವಿರಲಿ ಅದರ ಅರಿವು ಕೂಡಾ ಅಷ್ಟಕ್ಕಷ್ಟೇ. ಆದರೆ ಸ್ವಾನುಭವದ ಪ್ರಾಮಾಣ್ಯದಲ್ಲಿ ಮಕ್ಕಳು ದಿನನಿತ್ಯ ಕುಡಿಯುವ ನೀರಿಗೆ ಪಡುತ್ತಿದ್ದ ಕಷ್ಟವನ್ನು ನೋಡಿ ಸ್ವಯಂಪ್ರೇರಣೆಯಿಂದ ಬಾವಿ ತೋಡಲು ಮುಂದಾಗಿದ್ದು, ಕೆಲವರ ಕೀಟಲೆಗೂ ಗುರಿಯಾಗಿರುವ ವರದಿಗಳಿವೆ. ಆದರೆ ಗುರಿಯಲ್ಲಿ ಅಚಲ ವಿಶ್ವಾಸವಿದ್ದವನಿಗೆ, ಗುರಿಮುಟ್ಟಲು ಅನುಸರಿಸುವ ಮಾರ್ಗಗಳ ಬಗ್ಗೆ ಸ್ಷಷ್ಟ ತಿಳಿವಳಿಕೆ ಇದ್ದವರಿಗೆ ಕೀಟಲೆಯ ಕೋಟಲೆಗಳು ಹಿಂಜರಿಯುವಂತೆ ಮಾಡುವುದಿಲ್ಲ ಎಂಬುದಕ್ಕೆ ಗೌರಿನಾಯ್ಕ ಪ್ರತ್ಯಕ್ಷ ಸಾಕ್ಷಿ. ಹಾರೆ, ಪಿಕಾಶಿ, ಗುದ್ದಲಿ, ಬುಟ್ಟಿಗಳೊಂದಿಗೆ ಸಜ್ಜಾಗಿ ದಿನನಿತ್ಯ ವೃತದಂತೆ ಬಾವಿ ತೋಡಿದ ಈ ಮಹಿಳೆಗೆ ನಲವತ್ತು ಅಡಿಯಲ್ಲಿ ನೀರು ವಸರುವುದು ಕಂಡಾಗ ಬೆವರಿನ ಬೆಲೆಗಿಂತ ಮಕ್ಕಳಿಗೆ ನೀರು ಸಿಕ್ಕಿತಲ್ಲ ಎಂಬ ಆನಂದವೇ ಹೆಚ್ಚಾಗಿದ್ದು, ಈ ಮಹಿಳೆಯ ಹೃದಯ ವೈಶಾಲ್ಯತೆಯನ್ನು ಎತ್ತಿತೋರುತ್ತದೆ.
ಉದಾತ್ತ ಬುದ್ಧಿಯ ಈ ಮಹಿಳೆಗೆ ಸರ್ಕಾರಿ ಅಧಿಕಾರಿಗಳು ಅಡ್ಡಗಾಲು ಹಾಕಲು ಕಾರಣವೇನೆಂಬುದು ಈಗಲೂ ನಿಗೂಢವೇ. ಬಹುಶಃ ಸರ್ಕಾರಿ ಜಾಗದಲ್ಲಿ ಈ ಮಹಿಳೆ ಬಾವಿ ತೋಡಲು ಹೊರಟಿದ್ದು ಇದಕ್ಕೆ ಕಾರಣವಿರಬೇಕು. ನಿಜ, ಅಧಿಕಾರಿಗಳಿಗೆ ಸಂವಿಧಾನ ರೂಪಿಸಿರುವ ನಿಯಮಾವಳಿಯೇ ಮಾರ್ಗಸೂಚಿ. ಆತ್ಮಸಾಕ್ಷಿಗೆ ಇಲ್ಲಿ ಬೆಲೆ ಇಲ್ಲ. ಯಾಕೆಂದರೆ ಇದು ಬ್ರಿಟಿಷರು ಸೃಷ್ಟಿಸಿ ಬಿಟ್ಟು ಹೋಗಿರುವ ಅಧಿಕಾರಶಾಹಿ ಪರಂಪರೆ. ಅಧಿಕಾರಿ ಇರಲಿ ಅಥವಾ ಬೇರೆ ಯಾರೇ ಆಗಿರಲಿ, ನಿಯಮಾವಳಿಯ ಜೊತೆಗೆ ಆತ್ಮಸಾಕ್ಷಿಯ ಬೆಳಕಿನಲ್ಲಿ ಪರಿಸ್ಥಿತಿಯನ್ನು ನೋಡಿ ನಿರ್ಧಾರ ಕೈಗೊಳ್ಳುವ ವಿವೇಚನಾ ಮಾರ್ಗ ಪರಿಪಾಲಿಸಿದರೆ, ಆಗ ಆಡಳಿತದ ಸ್ವರೂಪವೇ ಬೇರೆ. ಇದನ್ನೇ ವಿಸ್ತರಿಸಿ ಹೇಳುವುದಾದರೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ರಾಮರಾಜ್ಯದ ಮಾದರಿ ಇದೇ. ಅಧಿಕಾರಿಗಳು ಕಣ್ಮುಚ್ಚಿಕೊಂಡು ಉರು ಹೊಡೆದಿರುವ ಕಾನೂನುಗಳ ಮೂಲಕ ಸಾರ್ವಜನಿಕ ಹಿತವನ್ನು ಸಾಧಿಸಲು ಹೊರಟರೆ ಆಗುವ ದುರಂತಕ್ಕೆ ಜನಸಾಮಾನ್ಯರು ದಿನನಿತ್ಯ ಎದುರಿಸುತ್ತಿರುವ ಸಂಕಟಗಳೇ ಪುರಾವೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸ್ವಾತಂತ್ರ್ಯ ಯೋಧ ಎಚ್.ಎಸ್. ದೊರೆಸ್ವಾಮಿ ಅವರು ಹೊರತರುತ್ತಿದ್ದ ಪತ್ರಿಕೆಯೊಂದರಲ್ಲಿ “ಅಧಿಕಾರಶಾಹಿಯನ್ನು ಭೂರಕ್ಕಸರು” ಎಂದು ಛೀಮಾರಿ ಹಾಕಿದ್ದರು. ಈ ಲೇಖನಕ್ಕೆ ಬ್ರಿಟಿಷ್ ಆಡಳಿತ ದೊರೆಸ್ವಾಮಿ ಹಾಗೂ ಇನ್ನಿತರರ ವಿರುದ್ಧ ಶಿಸ್ತಿನ ಕ್ರಮಕ್ಕೆ ಮುಂದಾದರೂ ಸ್ವಾತಂತ್ರ್ಯ ಯೋಧರು ಜಗ್ಗಲಿಲ್ಲ-ಬಗ್ಗಲಿಲ್ಲ. ಹಾಗೆಯೇ ಉತ್ತರಕನ್ನಡದ ಹೊಸ ಹೆಗ್ಗುರುತಿನಂತೆ ರೂಪುಗೊಂಡಿರುವ ಗೌರಿನಾಯ್ಕ ಅವರು ಕೂಡಾ ಅಧಿಕಾರಿಗಳ ಕಿರುಕುಳಕ್ಕೆ ಜಗ್ಗದೆ, ಬಗ್ಗದೇ, ಬಾವಿತೋಡಿ ಗಂಗಾವತರಣವಾಗುವಂತೆ ಮಾಡಿರುವ ಪವಾಡ ಇಡೀ ರಾಜ್ಯಕ್ಕೆ ಅಷ್ಟೇ ಅಲ್ಲ ದೇಶಕ್ಕೂ ಮಾದರಿಯಾಗಿ ಆಳುವ ಸರ್ಕಾರಗಳು ಕಣ್ತೆರೆದು ನೋಡುವಂತಹ ಪರಿಸ್ಥಿತಿಯನ್ನು ರೂಪಿಸಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ.