ಭಯಭೀತಿಯ ನಡುವೆ ಕಾಮಿಡಿ ಕಚಗುಳಿ!

Advertisement

ಚಿತ್ರ: ಮ್ಯಾಟ್ನಿ
ನಿರ್ದೇಶನ: ಮನೋಹರ್ ಕಾಂಪಲ್ಲಿ
ನಿರ್ಮಾಣ: ಪಾರ್ವತಿಗೌಡ
ತಾರಾಗಣ: ಸತೀಶ್ ನೀನಾಸಂ, ರಚಿತಾರಾಮ್, ಅದಿತಿ ಪ್ರಭುದೇವ, ನಾಗಭೂಷಣ್, ಶಿವರಾಜ್ ಕೆ.ಆರ್.ಪೇಟೆ, ಪೂರ್ಣಚಂದ್ರ ಹಾಗೂ ದಿಗಂತ್ ದಿವಾಕರ್.
ರೇಟಿಂಗ್ಸ್: 3

ಜಿ.ಆರ್.ಬಿ

ಹಾರರ್ ಸಿನಿಮಾ ಎಂದಮೇಲೆ ಅಲ್ಲೊಂದಿಷ್ಟು ಬೆಚ್ಚಿಬೀಳಿಸುವ ದೃಶ್ಯಗಳಿರಬೇಕು, ಅಬ್ಬರದ ಸಂಗೀತ, ಹೆಜ್ಜೆಹೆಜ್ಜೆಗೂ ಸಸ್ಪೆನ್ಸ್‌ಭರಿತವಾಗಿರಬೇಕು ಎಂಬ ಮಾಮೂಲಿ ಫಾರ್ಮುಲವನ್ನು ಬದಿಗೊತ್ತಿದ್ದಾರೆ ನಿರ್ದೇಶಕ ಮನೋಹರ್ ಕಾಂಪಲ್ಲಿ. ತೆಳುಹಾಸ್ಯದಂತೆ ತೆಳು ಹಾರರ್ ಶೈಲಿಯಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸಿದ್ದಾರೆ. ಹೀಗಾಗಿ ‘ಮ್ಯಾಟ್ನಿ’ಯಲ್ಲಿ ‘ನೈಟ್ ಶೋ’ ನೋಡಿದಷ್ಟು ಭಯವಾಗುದಿಲ್ಲವಾದರೂ, ‘ಫಸ್ಟ್ ಶೋ’ ನೋಡುವಾಗಲಿನ ಕತ್ತಲು, ಆತಂಕ ಆವರಿಸಿಕೊಳ್ಳುವುದಂತೂ ದಿಟ!

ನಾಲ್ವರು ಸ್ನೇಹಿತರು, ಬಾಲ್ಯದ ಗೆಳೆಯನನ್ನು ನೋಡಲು ಮನೆಗೆ ಬರುತ್ತಾರೆ. ಆತನ ಶ್ರೀಮಂತಿಕೆ ಕಂಡು ದಿಗ್ಭ್ರಾಂತರಾಗುವಷ್ಟು ಮಧ್ಯಮವರ್ಗದ ಸ್ನೇಹಿತರು, ಒಂದೆರಡು ದಿನ ಅಲ್ಲೇ ಕಾಲ ಕಳೆಯಲು ಪ್ಲಾನ್ ಹಾಕಿಕೊಳ್ಳುತ್ತಾರೆ. ಅದರ ಹಿಂದೆ ಮತ್ತಷ್ಟು ದುರಾಲೋಚನೆಯೂ ಇರುತ್ತದೆ. ಈ ನಡುವೆ ನಾಯಕನ ಅಮ್ಮ ತೀರಿಕೊಂಡಿರುತ್ತಾಳೆ. ಅದರ ಬೆನ್ನಲ್ಲೇ ಹುಡುಗಿಯೊಂದಿಗೆ ಪ್ರೇಮ ಟಿಸಿಲೊಡೆಯುತ್ತದೆ. ಇಷ್ಟೆಲ್ಲ ಘಟನೆಗಳ ಬೆನ್ನಲ್ಲೇ ಸ್ನೇಹಿತರ ಆಗಮನವಾಗುತ್ತದೆ. ಅಸಲಿ ದೆವ್ವದಾಟ ಶುರುವಾಗುವುದೇ ಅಲ್ಲಿಂದ…

ಮನೆಯೊಳಗೇ ನಡೆಯುವ ‘ಭೂತಚೇಷ್ಟೆ’, ಗೆಳೆಯರ ಮನಸ್ಸಿನೊಳಗೂ ಹೋಗಿ ಕಾಡುತ್ತದೆ. ಅದಕ್ಕೆಲ್ಲ ಕಾರಣವೇನು ಎಂಬುದಕ್ಕೆ ಫ್ಲ್ಯಾಶ್‌ಬ್ಯಾಕ್ ಇದೆ. ಅದನ್ನು ಸಿನಿಮಾದಲ್ಲೇ ನೋಡಬೇಕು. ಅಷ್ಟಕ್ಕೂ ದೆವ್ವ ಯಾರ ಮೈಮೇಲೆ ಹೊಕ್ಕಿರುತ್ತದೆ, ಯಾಕಾಗಿ ಕಾಡುತ್ತದೆ, ಅವರನ್ನೆಲ್ಲ ಬೆವರಿಳಿಸುತ್ತದೆ ಎಂಬುದಕ್ಕೆ ಒಂದಷ್ಟು ಕಾರಣಗಳೂ ಉಂಟು. ಹಾರರ್ ಸಿನಿಮಾ ಎಂದಮೇಲೆ ಭಾಗಶಃ ಲಾಜಿಕ್ ಬಿಟ್ಟು ನೋಡಬೇಕು. ‘ಮ್ಯಾಟ್ನಿ’ಯಲ್ಲಿ ಭರಪೂರ ಮ್ಯಾಜಿಕ್ ಇದೆ. ಸಿದ್ಧಸೂತ್ರದ ಮಸಾಲೆಯೂ ಇದೆ. ಹಾರರ್, ಸಸ್ಪೆನ್ಸ್, ಕಾಮಿಡಿ ಹದವಾಗಿ ಬೆರೆಸುವ ಯತ್ನ ಒಂದು ಹಂತದವರೆಗೂ ಸಫಲವಾಗಿದೆ.

ಇನ್ನು ಸತೀಶ್ ನೀನಾಸಂಗೆ ಇದೇ ಮೊದಲ ಹಾರರ್ ಜಾನರ್ ಸಿನಿಮಾ. ಅವರ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರಚಿತಾರಾಮ್ ಕಾಣಿಸಿಕೊಳ್ಳೋದು ಒಂದು ಹಾಡು, ಕೆಲವು ದೃಶ್ಯಗಳಲ್ಲಿ ಮಾತ್ರ. ಅದಿತಿ ಪ್ರಭುದೇವ, ನಾಗಭೂಷಣ್, ಶಿವರಾಜ್ ಕೆ.ಆರ್.ಪೇಟೆ, ಪೂರ್ಣಚಂದ್ರ ಹಾಗೂ ದಿಗಂತ್ ದಿವಾಕರ್ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ಸುಧಾಕರ್ ಎಸ್ ರಾಜ್ ಕ್ಯಾಮೆರಾ ಕೈಚಳಕ ಚಿತ್ರಕ್ಕೆ ಪೂರಕವಾಗಿದೆ.