ಅಂತರ್‌ರಾಷ್ಟ್ರೀಯ ಸೃಜನಶೀಲ ಅಧ್ಯಾಪನ ಕೇಂದ್ರದ ಕಾರ್ಯ ಸುಗಮವಾಗಿ ನಡೆಯುತ್ತಿತ್ತು. ನಾನು ಪ್ರತಿವರ್ಷದಂತೆ ಅಮೇರಿಕಾಗೆ ಹೋಗುವಾಗ ಒಂದು ವರ್ಷ ನನ್ನ ಜೊತೆಗೆ ಡಾ. ಶ್ರೀಧರ್ ಬಂದರು. ಅವರು ಸ್ವಾಮಿ ನಾರಾಯಣ ಸಂಸ್ಥೆಗೆ ತುಂಬ ಹತ್ತಿರವಾಗಿದ್ದವರು, ಯೋಗ ಶಿಕ್ಷಕರು. ಅಮೇರಿಕೆಯಲ್ಲಿ ಅವರು ನನ್ನನ್ನು ಕೆಲವು ಜನ ತಮ್ಮ ಪರಿಚಿತರ ಬಳಿಗೆ ಕರೆದೊಯ್ದರು. ನ್ಯೂಯಾರ್ಕ್ದಲ್ಲಿ, ಹ್ಯೂಸ್ಟನ್‌ನಲ್ಲಿ ಕೆಲವರ ಮನೆಗಳಿಗೆ ಹೋಗಿ ಬಂದ ಮೇಲೆ ಬೇಕರ್ಸಫೀಲ್ಡ್ ಎನ್ನುವ ಸ್ಥಳಕ್ಕೆ ಕರೆದುಕೊಂಡು ಹೋದರು.
ಇದು ಕ್ಯಾಲಿಫೋರ್ನಿಯಾ ರಾಜ್ಯದ ಕೆರ್ನ ಕೌಂಟಿಗೆ ಸೇರಿದ ಸ್ಥಳ. ಸುಮಾರು ನಾಲ್ಕು ಲಕ್ಷ ಜನಸಂಖ್ಯೆಯಿರುವ ನಗರ. ಸಂಗೀತಕ್ಕೆ ಮತ್ತು ಸುಂದರವಾದ ತೋಟಗಳಿಗೆ ಹೆಸರಾದ ಪ್ರದೇಶ ಬೇಕರ್ಸಫೀಲ್ಡ್. ನಾವು ಅಲ್ಲಿಗೆ ಹೋದದ್ದು ವೈದ್ಯರೊಬ್ಬರ ಮನೆಗೆ. ಆ ವೈದ್ಯರ ಹೆಸರು ಡಾ. ರಮೇಶ ಗುಪ್ತ. ಅವರು ಮೂಲತ: ಹರಿಯಾಣದ ರೋಹಟಕ್ ನಗರದವರು. ಅವರು ದೆಹಲಿಯಲ್ಲಿರುವ, ಪ್ರಸಿದ್ಧವಾದ AIIMS ದಲ್ಲಿ ವೈದ್ಯ ಶಿಕ್ಷಣ ಪಡೆದು ಸ್ನಾತಕೋತ್ತರ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದು ಖ್ಯಾತರಾದವರು. ನಂತರ ಅಮೇರಿಕೆಗೆ ಹೋಗಿ ಅಲ್ಲಿಯೇ ಕಾರ್ಯಮಾಡುತ್ತ ನೆಲೆ ನಿಂತವರು. ಬೇಕರ್ಸ್ಫೀಲ್ಡ್ನಲ್ಲಿ ಅವರದೇ ಒಂದು ಆಸ್ಪತ್ರೆ ಇದೆ. ಅದು ಪುಟ್ಟ ದವಾಖಾನೆ ಅಲ್ಲ. ಅಲ್ಲಿ ಹತ್ತಾರು ಅಮೇರಿಕನ್ ವೈದ್ಯರು ಕೆಲಸ ಮಾಡುತ್ತಾರೆ. ಅಮೇರಿಕೆಯ ಅತ್ಯಂತ ಶ್ರೀಮಂತರೆನ್ನಿಸಿಕೊಳ್ಳುವ, ಪ್ರತಿಶತ ಒಂದರಷ್ಟು ಜನರಲ್ಲಿ ರಮೇಶ್ ಗುಪ್ತರವರೂ ಒಬ್ಬರು.
ಅವರ ಮನೆಗೆ ಹೋದೆವು. ಅದನ್ನು ಮನೆ ಎಂದು ಕರೆಯುವುದೇ ಸಾಧ್ಯವಿಲ್ಲ. ನನಗೆ ಅರಮನೆಗಳಲ್ಲಿ ಇದ್ದ ರೂಢಿಯಿಲ್ಲ. ಆದರೆ ಅರಮನೆಗಳು ಡಾ. ಗುಪ್ತರವರ ಮನೆಗಿಂತ ವಿಶೇಷವೇನೂ ಇರಲಿಕ್ಕಿಲ್ಲ ಎನ್ನಿಸಿತು. ಆ ಮನೆ ಎಷ್ಟು ದೊಡ್ಡದು ಎಂದು ಹೇಳುವುದೇ ಕಷ್ಟ. ಒಂದು ವಿಷಯ ಹೇಳಿದರೆ ಅವರ ಮನೆಯ ವಿಸ್ತಾರ ತಮ್ಮ ಯೋಚನೆಗೆ ಮುಟ್ಟೀತು. ಮನೆಯನ್ನು ಪ್ರವೇಶಿಸಿದೊಡನೆ ಒಂದು ಪ್ರಾಂಗಣವಿದೆ. ಅದರ ಮುಂದೆ ಒಂದು ಹಾಲ್ ಇದೆ. ಈ ಪ್ರಾಂಗಣದಲ್ಲಿಯೇ ಸುಮಾರು ಇನ್ನೂರು ಜನ ಕುಳಿತುಕೊಳ್ಳಬಹುದು! ಅವರ ಮನೆಯಲ್ಲಿ ನಾನು ನಾಲ್ಕೈದು ದಿನಗಳಿದ್ದರೂ ಅಲ್ಲಿ ಎಷ್ಟು ಕೋಣೆಗಳಿವೆ ಎಂಬುದು ತಿಳಿಯಲಿಲ್ಲ. ಮನೆಯ ಒಂದು ಬದಿಗೆ ಟೆನಿಸ್ ಕೋರ್ಟ್ ಇದೆ, ಹಿಂಭಾಗದಲ್ಲಿ ಸುಂದರವಾದ ಈಜುಗೊಳವಿದೆ. ಮನೆಯ ಒಂದು ಪಕ್ಕಕ್ಕೆ ಕಾರುಗಳನ್ನು ನಿಲ್ಲಿಸುವ ಸ್ಥಳ. ಅಲ್ಲಿ ಯಾವಾಗಲೂ ನಾಲ್ಕು ಕಾರುಗಳು ಇರುತ್ತಿದ್ದವು.
ನಾನು ಇದನ್ನು ಬರೆಯುತ್ತಿದ್ದುದು ಅವರ ಶ್ರೀಮಂತಿಕೆಯನ್ನು ಹೊಗಳುವುದಕ್ಕಲ್ಲ. ಅವರ ಮನೆಯಲ್ಲಿ ಒಂದು ಅತ್ಯಂತ ವಿಶೇಷವನ್ನು ಕಂಡೆ. ರಮೇಶ್‌ರ ಮನೆಯಲ್ಲಿ ಅವರ ತಮ್ಮ ಡಾ. ವಿನೋದ ಕೂಡ ಇರುತ್ತಾರೆ. ಡಾ. ವಿನೋದ ಒಬ್ಬ ಖ್ಯಾತ ಹೃದಯತಜ್ಞರು. ಇಡೀ ಲಾಸ್ ಎಂಜಲೀಸ್ ಪ್ರಾಂತ್ಯದ ಹೃದಯತಜ್ಞರ ಸಂಘದ ಅಧ್ಯಕ್ಷರು. ಬೇಕರ್ಸಫೀಲ್ಡ್ನಲ್ಲಿ ಅವರದೂ ಒಂದು ದೊಡ್ಡ ಆಸ್ಪತ್ರೆ ಇದೆ. ಇಬ್ಬರೂ ಅಣ್ಣ ತಮ್ಮಂದಿರು ಒಂದೇ ಮನೆಯಲ್ಲಿ ತಮ್ಮ ಹೆಂಡಿರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಈಗ ಭಾರತದಲ್ಲೇ ಒಟ್ಟು ಕುಟುಂಬ ಅಪರೂಪವಾಗಿರುವಾಗ, ಅಮೇರಿಕೆಯಲ್ಲಿ ಅಂತಹ ಪರಿವಾರ ನನಗೆ ಸಂತೋಷವನ್ನು, ಆಶ್ಚರ್ಯವನ್ನು ತಂದಿತು. ಇಬ್ಬರ ಮಕ್ಕಳಲ್ಲೂ ಯಾವ ಭೇದಭಾವವಿಲ್ಲ. ಎಲ್ಲರನ್ನು ಒಂದೇ ಸಮನಾಗಿ ಕಾಣುತ್ತಾರೆ. ಬೆಳಿಗ್ಗೆ ಎದ್ದು ಎಲ್ಲರೂ ಸ್ನಾನ ಮಾಡಿ ಮನೆಯ ಮುಂದೆ ಬಂದು ಸೂರ್ಯನಿಗೆ ಅರ್ಘ್ಯ ಕೊಡುತ್ತಾರೆ. ಆಮೇಲೆಯೇ ಬೆಳಗಿನ ತಿಂಡಿ. ಅನಂತರ ತಮ್ಮ ತಮ್ಮ ಕೆಲಸಗಳಿಗೆ ತೆರಳುತ್ತಾರೆ. ಸಂಜೆ ಮನೆಯಲ್ಲಿ ಎಲ್ಲರೂ ಸೇರಿ ಭಜನೆ ಮಾಡುತ್ತಾರೆ. ಅದಾದ ನಂತರವೇ ರಾತ್ರಿಯ ಊಟ. ರಮೇಶ್ ಮತ್ತು ವಿನೋದರವರ ಹೆಂಡಂದಿರು ಹೊರಗಡೆ ಕೆಲಸಕ್ಕೆ ಹೋಗುವವರಲ್ಲ. ಮನೆಯ ಜವಾಬ್ದಾರಿಯೆಲ್ಲ ಅವರದೇ. ಅವರಿಬ್ಬರೂ ಅಕ್ಕತಂಗಿಯರಂತೆ ಹೊಂದಿಕೊಂಡಿದ್ದಾರೆ. ಆ ಅನ್ಯೋನ್ಯತೆಯನ್ನು ನಿಜವಾದ ಅಕ್ಕ-ತಂಗಿಯರಲ್ಲಿ ಕಾಣುವುದು ಕಷ್ಟ. ಯಾರು ಯಾರಿಗೂ ಕೆಲಸ ಹೇಳಬೇಕಿಲ್ಲ. ಅವರೇ ತಮ್ಮ ತಮ್ಮ ಜವಾಬ್ದಾರಿಯನ್ನು ತಿಳಿದುಕೊಂಡು ಮಾಡಿ ಮುಗಿಸುತ್ತಾರೆ. ಮನೆಯಲ್ಲಿ ಒಬ್ಬರಿಗೂ ತಾವು ಶ್ರೀಮಂತರೆಂಬ ಜಂಬ ಇಲ್ಲ. ಅವರು ನಡೆಸುವ ಬದುಕು ಪಕ್ಕಾ ಮಧ್ಯಮವರ್ಗದವರಂತೆಯೇ.
ನಾನು ಅಲ್ಲಿಗೆ ಹೋದ ಸಂದರ್ಭ ವಿಶೇಷವಾದದ್ದು. ನಾನು ಆಗಲೇ ಅಂತರ್‌ರಾಷ್ಟ್ರೀಯ ಸೃಜನಶೀಲ ಅಧ್ಯಾಪನ ಕೇಂದ್ರವನ್ನು ಪ್ರಾರಂಭಿಸಿ ಮೂರು ವರ್ಷಗಳಾಗಿದ್ದವು. ಆಗ ಹಿರಿಯರೊಬ್ಬರ ಮಾರ್ಗದರ್ಶನದಂತೆ ನಮ್ಮದೇ ಒಂದು ಸಂಸ್ಥೆಯನ್ನು ಸ್ಥಾಪಿಸಬೇಕೆಂದು ತೀರ್ಮಾನಿಸಿ, ಇದ್ದ ಸಂಸ್ಥೆಗೆ ತಿಳಿಸಿ ಹೊರಬರಲು ರಾಜೀನಾಮೆಯನ್ನು ಕೊಟ್ಟಿದ್ದೆ. ಆದರೆ ಸಂಸ್ಥೆಯವರು ತೋರಿದ ಪ್ರೀತಿ, ಗೌರವವನ್ನು ಮರೆಯುವಂತಿಲ್ಲ. ಹೊಸ ಸಂಸ್ಥೆಯನ್ನು ಕಟ್ಟುವುದು ಹುಡುಗಾಟವೇ? ಮೂವತ್ತು ವರ್ಷಗಳ ಸೇವೆ ಮಾಡಿದ ನನಗೆ, ಜನಪ್ರೀತಿ ಬೇಕಾದಷ್ಟು ದೊರಕಿತ್ತು. ಆದರೆ ಹಣ ನನಗೆ ಒಲಿದು ಬರಲಿಲ್ಲ. ಹಣ ಬರಲಿಲ್ಲ ಎನ್ನುವುದಕ್ಕಿಂತ, ನನಗೆ ಅದನ್ನು ಪಡೆಯುವ ಯಾವ ಉತ್ಸಾಹವೂ ಇರಲಿಲ್ಲ. ಹಣ ನನ್ನನ್ನು ಎಂದಿಗೂ ಬಲವಾಗಿ ಆಕರ್ಷಿಸಲೇ ಇಲ್ಲ. ಅಲ್ಲಿಯವರೆಗೂ ನನಗೆ ಹಣ ಬೇಕು ಎಂದೂ ಎನ್ನಿಸಿರಲಿಲ್ಲ. ಆದರೆ ಈಗ ಸಂಸ್ಥೆಯನ್ನು ಕಟ್ಟಲು ಹೊರಟಾಗ ಸ್ವಲ್ಪ ಹಣವಿದ್ದರೆ ಚೆನ್ನಾಗಿತ್ತು ಎನ್ನಿಸಿತು. ಸಂಸ್ಥೆಗೊಂದು ಕಟ್ಟಡ ಬೇಡವೆ? ಬಾಡಿಗೆಗೆ ತೆಗೆದುಕೊಳ್ಳೋಣವೆಂದರೆ ಡಿಪಾಸಿಟ್ ಮತ್ತು ಮುಂಗಡ ಕೊಡುವುದಕ್ಕೆ ಸಾಕಷ್ಟು ಹಣ ಬೇಕಿತ್ತು. ಒಂದೆರಡು ಕಟ್ಟಡಗಳನ್ನು ನೋಡಿ ಬಂದರೂ ಅವುಗಳಿಗೆ ಮುಂಗಡ ಕೊಡುವಷ್ಟು ಹಣ ನನ್ನ ಬಳಿ ಇರಲಿಲ್ಲ. ನಿರಾಶನಾಗದಿದ್ದರೂ, ಒಂದು ರೀತಿಯ ಕೊರಗು ಇತ್ತು.
ಈ ಸಂದರ್ಭದಲ್ಲಿ ನಾನು ಡಾ. ರಮೇಶ ಗುಪ್ತಾರವರ ಮನೆಗೆ ಹೋದದ್ದು. ಅವರಲ್ಲಿ ಹಣ ಕೇಳಬೇಕೆಂಬ ಮನಸ್ಥಿತಿಯಾಗಲೀ, ಯೋಚನೆಯಾಗಲೀ ಇರಲೇ ಇಲ್ಲ. ಅಲ್ಲಿ ನಾಲ್ಕೈದು ದಿನವಿದ್ದು, ಅಮೇರಿಕೆಯ ಕೆಲಸ ಮುಗಿಸಿ ಮರಳಿ ಬಂದೆ. ಮತ್ತೆ ನಾಲ್ಕು ತಿಂಗಳುಗಳ ನಂತರ ಅಲ್ಲಿಗೆ ಮತ್ತೆ ಹೋಗಬೇಕಾಯಿತು. ಡಾ. ರಮೇಶ ಬಂದು ಮನೆಗೆ ಕರೆದುಕೊಂಡು ಹೋದರು. ಅವರು ಮತ್ತವರ ಮನೆಮಂದಿಯೆಲ್ಲ ನನ್ನನ್ನು ತುಂಬ ಹಚ್ಚಿಕೊಂಡಿದ್ದರು. ಅಲ್ಲಿದ್ದಾಗ ಒಂದು ದಿನ ತಮ್ಮ ಪರಿಚಯದ ವೈದ್ಯ ಮಿತ್ರರನ್ನೆಲ್ಲ ಮನೆಗೆ ಕರೆದು ಬಂದು ಸ್ನೇಹಕೂಟವನ್ನು ಮಾಡಿ, ನನಗೆ ಭಗವದ್ಗೀತೆಯ ಹನ್ನೊಂದನೇ ಅಧ್ಯಾಯದ ಬಗ್ಗೆ ಮಾತನಾಡಲು ಕೇಳಿಕೊಂಡರು. ಮುಂದೆರಡು ದಿನಕ್ಕೆ ಅಲ್ಲಿಂದ ನಾನು ಮರಳಬೇಕು. ಹೊರಡುವ ದಿನ ಬಂದಾಗ ನನ್ನನ್ನು ಲಾಸ್ ಎಂಜಲಿಸ್‌ಗೆ ಕಳುಹಿಸಲು ಲಿಮೋಸಿನ್ ತರಿಸಿದ್ದರು. ಅದು ಸುಮಾರು ಇಪ್ಪತ್ತು ಅಡಿ ಉದ್ದದ ಕಾರು. ಡ್ರೈವರ್ ಹತ್ತಿರ ಮಾತನಾಡಲು ಫೋನ್ ಮಾಡಬೇಕು. ಕಾರಿನಲ್ಲಿ ಹಾಸಿಗೆ, ಟಿ.ವಿ, ಫ್ರಿಜ್ ಎಲ್ಲವೂ ಇತ್ತು. ಹೋಗುವವನು ನಾನೊಬ್ಬನೇ ಇಷ್ಟು ದೊಡ್ಡ ಕಾರೇಕೆ ಎಂದು ಕೇಳಿದರೂ ನನ್ನನ್ನು ಅದರಲ್ಲಿಯೇ ಹೋಗಲು ಒತ್ತಾಯಿಸಿದರು. ನಾನು ಕಾರು ಹತ್ತುವಾಗ ರಮೇಶ್ ಸರಸರನೆ ಬಂದು ಕಾಲು ಮುಟ್ಟಿ ನಮಸ್ಕಾರ ಮಾಡಿದರು. ಅವರ ಕಣ್ಣಲ್ಲಿ ನೀರಿತ್ತು. “ಸರ್, ನೀವು ಬೆಂಗಳೂರಿನಲ್ಲಿ ಏನಾದರೂ ಯೋಜನೆ ಹಾಕಿಕೊಂಡಿದ್ದರೆ ಹೇಳಿ, ನಾನು ಸಹಾಯ ಮಾಡುತ್ತೇನೆ. ಒಂದು ಮಿಲಿಯನ್ ಡಾಲರ್‌ವರೆಗೂ ಯಾವ ಯೋಚನೆ ಇಲ್ಲ” ಎಂದರು. ನಾನು ನಕ್ಕು ಬಿಟ್ಟು, “ನನಗೆ ಯಾವ ಅಂಥ ಯೋಜನೆಯೂ ಇಲ್ಲ. ಮುಂದೆ ಬಂದರೆ ಹೇಳುತ್ತೇನೆ” ಎಂದು ಹೇಳಿ ಬಂದುಬಿಟ್ಟೆ. ಅಲ್ಲಿಂದ, ಅವರ, ನನ್ನ ಬಾಂಧವ್ಯ ಗಟ್ಟಿಯಾಗುತ್ತ ಬಂದಿತು. ಅವರ ಮನೆಯಲ್ಲಿ ಯಾವುದೇ ಶುಭಕಾರ್ಯವಾಗುವುದಾದರೂ ಅಮೇರಿಕೆಯಿಂದ ಬೆಂಗಳೂರಿಗೆ ಬಂದು ನಮ್ಮ ಮನೆಯಲ್ಲಿ ನಾಲ್ಕು ದಿನ ಇರುವರು. ಅದು ಅವರಿಗೆ ಶುಭವನ್ನುಂಟುಮಾಡುತ್ತದೆಂಬ ನಂಬಿಕೆ.
ಒಂದು ಬಾರಿ ಡಾ. ರಮೇಶ್ ಮನೆಗೆ ಬಂದರು. ಅವರು ದೆಹಲಿಯಲ್ಲಿ ಒಂದು ದೊಡ್ಡ ಆಸ್ಪತ್ರೆ ಕಟ್ಟಲು ತೀರ್ಮಾನಿಸಿದ್ದರು. ಅದರ ಪ್ರಾರಂಭಕ್ಕಿಂತ ಮೊದಲು ನಮ್ಮ ಮನೆಯಲ್ಲಿದ್ದು ಹೋಗುವುದು ಅವರ ಯೋಜನೆ. ದಿನಾಲು ಬೆಳಿಗ್ಗೆ ರಮೇಶ್ ಕೆಲಸಕ್ಕೆಂದು ಹೊರಗೆ ಹೋಗುತ್ತಿದ್ದರು ಮತ್ತು ಮರಳಿ ಸಂಜೆಗೆ ಬರುತ್ತಿದ್ದರು. ಎಂಟು ದಿನಗಳಾದ ಮೇಲೆ ಒಂದು ಸಂಜೆ ನನಗೆ ಜೊತೆಗೆ ಬರುವಂತೆ ಹೇಳಿ ಕರೆದುಕೊಂಡು ಒಂದು ಕಟ್ಟಡದ ಬಳಿಗೆ ಹೋದರು. ಅದನ್ನು ನಾನು ಕಟ್ಟಬೇಕೆಂದಿದ್ದ ಸಂಸ್ಥೆಗಾಗಿ ನೋಡಿ ಬಂದಿದ್ದೆ. ಅದನ್ನವರು ಹೇಗೊ ತಿಳಿದುಕೊಂಡಿದ್ದರು. ನಾನು ಅಲ್ಲಿಗೆ ಹೋದಾಗ ಕಟ್ಡಡದಲ್ಲೆಲ್ಲ ನನ್ನನ್ನು ತಿರುಗಾಡಿಸಿದರು. ಮೊದಲು ಖಾಲಿಯಾಗಿದ್ದ ಕಟ್ಟಡ ಈಗ ಪರಿಪೂರ್ಣ ಆಫೀಸಾಗಿದೆ! ಟೇಬಲ್, ಕುರ್ಚಿಗಳು, ಕಂಪ್ಯೂಟರುಗಳು, ಫೋನ್‌ಗಳು ಎಲ್ಲವೂ ಸಜ್ಜಾಗಿವೆ. ಆಗ ಡಾ. ರಮೇಶ ಕಟ್ಟಡದ ಬೀಗದ ಕೈಯನ್ನು ನನಗೆ ಕೊಟ್ಟು “ಸರ್, ಇದು ನಿಮ್ಮ ಹೊಸ ಆಫೀಸು. ಇಲ್ಲಿಂದಲೇ ತಮ್ಮ ಕಾರ್ಯಪ್ರಾರಂಭವಾಗಲಿ” ಎಂದರು. ಅಲ್ಲಿಂದಲೇ ಸೃಜನಶೀಲ ಅಧ್ಯಾಪನ ಕೇಂದ್ರ (ACT) ಪ್ರಾರಂಭವಾಗಿ ಇಂದಿಗೂ ಅಲ್ಲಿಯೇ ಸಂಭ್ರಮದಿಂದ ಕಾರ್ಯ ಮಾಡುತ್ತಿದೆ. ಇದು ನನಗೆ ಮೊದಲಿನಿಂದಲೇ ಇದ್ದ ನಂಬಿಕೆಯನ್ನು ಮತ್ತಷ್ಟು ಭದ್ರಪಡಿಸಿತು. ಯಾವುದೇ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ, ತನ್ಮಯತೆಯಿಂದ ಮಾಡುತ್ತಿದ್ದರೆ, ಯಾವುದೇ ಪ್ರತಿಫಲವನ್ನು ಬೇಡದಿದ್ದಲ್ಲಿ, ಭಗವಂತ ನಮ್ಮ ಪಕ್ಕದಲ್ಲೇ ನಿಂತು ಆ ಕಾರ್ಯವನ್ನು ಸಾಧ್ಯಮಾಡುತ್ತಾನೆ. ಅವನ ಕರುಣೆ ಹರಿದು ಬರುತ್ತದೆ. ಇದು ಅವನ ಕಾರ್ಯ. ಅನೇಕ ಬಾರಿ ನನಗೆ ಇದು ಬದುಕಿನಲ್ಲಿ ಅನುಭವಕ್ಕೆ ಬಂದಿದೆ.