ಲಕ್ಷ್ಮೇಶ್ವರ: ಯಾರು ಏನು ಬೇಕಾದರೂ ತಿನ್ನಬಹುದು. ಆ ಸ್ವಾತಂತ್ರ‍್ಯ ಎಲ್ಲರಿಗೂ ಇದೆ. ಆದರೆ, ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ ಎನ್ನುವ ಭಂಡತನದ ಹೇಳಿಕೆಯನ್ನೂ ಯಾರೂ ಒಪ್ಪುವದಿಲ್ಲ. ನಮ್ಮ ನಾಡಿನಲ್ಲಿ ವಿಶೇಷ ಸಂಸ್ಕೃತಿ-ಪರಂಪರೆ, ಆಚರಣೆ, ಧಾರ್ಮಿಕ ನಂಬಿಕೆ ಶ್ರದ್ಧೆ, ದೈವವನ್ನು ನಂಬಿ ಜೀವನ ನಡೆಸುವ ಅಪಾರ ಜನರಿದ್ದಾರೆ. ರಾಜಕಾರಣಿಗಳ ಹೇಳಿಕೆಯಿಂದ ಜನರ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಬಾರದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಪರೋಕ್ಷವಾಗಿ ಪ್ರತಿಕ್ರಿಯಿಸಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಉನ್ನತ ಸ್ಥಾನದಲ್ಲಿರುವವರು, ರಾಜಕಾರಣಿಗಳು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ಬಹಿರಂಗವಾಗಿ ಹೇಳಿಕೆ ನೀಡಬಾರದು. ರಾಜಕಾರಣಿಗಳು ದೇವಸ್ಥಾನಕ್ಕೂ ಹೋಗುತ್ತಾರೆ. ಮಠ-ಮಾನ್ಯಗಳಿಗೂ ತೆರಳುತ್ತಾರೆ ಆದರೆ, ಅಲ್ಲಿ ಹೋದಾಗ ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಮುಖ್ಯ. ರಾಜಕಾರಣಿಗಳ ನಡವಳಿಕೆ ಮಾದರಿಯಾಗಬೇಕು ಎಂದರು.