ಬ್ರಾಹ್ಮಣರಿಗೆ ಮೀಸಲಾತಿ; ಅಧಿವೇಶನದಲ್ಲಿ ಧ್ವನಿ ಎತ್ತುವೆ: ಯತ್ನಾಳ

ಯತ್ನಾಳ
Advertisement

ವಿಜಯಪುರ: ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರು ಸೇರಿದಂತೆ ೧೦೪ ಜಾತಿಗಳಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಶೇ. ೧೦ ಮೀಸಲಾತಿ ಸೌಲಭ್ಯವನ್ನು ರಾಜ್ಯದಲ್ಲಿಯೂ ಅನುಮೋದಿಸುವಂತೆ ಆಗ್ರಹಿಸಿ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು.
ಜನಸಂಖ್ಯೆ ದೃಷ್ಟಿಯಿಂದ ದೇಶದಲ್ಲಿ ಬ್ರಾಹ್ಮಣರೇ ಅಲ್ಪಸಂಖ್ಯಾತರು ಎಂಬ ತಮ್ಮ ಹೇಳಿಕೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸ್ವಾಗತಿಸಿ ಅಭಿನಂದನೆ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿ, ಬ್ರಾಹ್ಮಣರು ಹಿಂದೂ ಧರ್ಮದ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದವರು. ಸ್ವಾತಂತ್ರ್ಯಾನಂತರ ವಿವಿಧ ಕಾರಣಗಳಿಂದಾಗಿ ಬ್ರಾಹ್ಮಣರು ಮುಖ್ಯವಾಹಿನಿಯಿಂದ ಹೊರಗುಳಿಯುವಂತಾಗಿದ್ದು ದುರದೃಷ್ಟಕರ. ಬ್ರಾಹ್ಮಣರಲ್ಲಿಯೂ ಸಾಕಷ್ಟು ಬಡವರಿದ್ದಾರೆ. ಮೇಲ್ವರ್ಗದಲ್ಲಿ ಗುರುತಿಸಿಕೊಳ್ಳುವ ಜಾತಿಗಳ ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಈ ವರ್ಗಕ್ಕೆ ಶೇ. ೧೦ರಷ್ಟು ಮೀಸಲಾತಿ ಸೌಲಭ್ಯ ಒದಗಿಸಿದೆ ಎಂದರು.
ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿಯೇ ಇಡಬ್ಲ್ಯೂಎಸ್ ಅನುಮೋದಿಸಲಾಗಿದ್ದರೆ, ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಯಾಕೆ ಬೇಡ? ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದ ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಒತ್ತಡ ತರಲಾಗುವುದು, ಒಂದೊಮ್ಮೆ ಸರ್ಕಾರ ವಿಳಂಬ ಮಾಡಿದಲ್ಲಿ ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಧ್ವನಿ ಎತ್ತಲಾಗುವುದು ಎಂದರು.