ಬರೀ ಫೋನು ಮಾಡಿ ಹೇಳಿದರೆ ಬೋರ್ಡನ್ನು ಬದಲಾಯಿಸಬೇಕು ಎಂದು ಅದ್ಯಾರೋ ಕ್ವಾಂಟ್ರಿಟ್ಟಪ್ಪನಿಗೆ ಹೇಳಿದ್ದೇ ತಡ..ಆತ ಮರುದಿನ ತನ್ನ ಅಂಗಡಿ ಮೇಲಿದ್ದ ಇಟ್ಟಪ್ಪ ಪ್ರಾವಿಷನ್ ಸ್ಟೋರ್ಸ್ ಎಂಬ ಬೋರ್ಡನ್ನ ಇಟ್ಟಪ್ಪ ಕಿ ರಾಣಿ ಸ್ಟೋರ್ಸ್ ಎಂದು ಬದಲಿಸಿದ. ತಳವಾರ್ಕಂಟಿ ಕಂಟಿ ಪಾನ್ ಅಂಗಡಿ ಇದ್ದದ್ದನ್ನು ಕಂ.. ಟೀ.. ಪಾನ್ ಎಂದು ಶಾರ್ಟ್ ಆಗಿ ಬದಲಿಸಿಕೊಂಡ. ಶೇಷಮ್ಮಳು ತನ್ನ ಹೊಟೆಲ್ ಮೇಲೆ ಶೇಷಮ್ಮನ ಮಿರ್ಚಿ-ಕಾದಿದೆ ಕುರ್ಚಿ ಎಂದು ಬೋರ್ಡು ಬರೆಯಿಸಿ ಹಾಕಿಸಿಕೊಂಡಳು. ಕುಂಟ್ತಿರುಪ್ತಿ ತನ್ನ ಭವಿಷ್ಯ ಹೇಳುವ ಬೋರ್ಡನ್ನು ತಿರುಪ್ತಿ ಕಾ ಭವಿಷ್ ಎಂದು ಚೇಂಜ್ ಮಾಡಿಕೊಂಡ. ಪಾಮಣ್ಣ ತನ್ನ ಫಾರ್ಮಸಿಯ ಮೇಲೆ ಪಾಮಣ್ಣನ ಮಾತ್ರೆ-ಅಲ್ಲಿಗೆ ಯಾತ್ರೆ ಎಂದು ಬರೆಯಿಸಿ ಇಮೋಜಿ ಹಾಕಿಸಿದ. ಮೇಕಪ್ ವಸ್ತುಗಳನ್ನು ಮಾರುತ್ತಿದ್ದ ಮೇಕಪ್ ಮರೆಮ್ಮ ತನ್ನ ಮನೆಯ ಮುಂದೆ ಮೇ-ಕಪ್ ಸಿಗುತ್ತವೆ ಎಂದಷ್ಟೇ ಬೋರ್ಡು ಬರೆಯಿಸಿದಳು. ತಾವು ಬೋರ್ಡು ಹಾಕಿಸಿಕೊಂಡಿದ್ದು ಸರಿಯಾಗಿ ಇದೆಯೋ ಇಲ್ಲವೋ ಎಂದು ಕಂಟ್ರಂಗಮ್ಮತ್ತಿಯ ಸಲಹೆ ಕೇಳಿ ಆಕೆಯನ್ನು ಕರೆದುಕೊಂಡು ಬಂದು ಬೋರ್ಡುಗಳನ್ನು ತೋರಿಸಿದರು. ಆಕೆ ಏನಡ್ಡಿಯಿಲ್ಲ ಎಂದು ಹೇಳಿದ ಮೇಲೆ ಬೋರ್ಡುಗಳಿಗೆ ಚಂಡುವಿನ ಹಾರ ಹಾಕಿ ಊದಿನಕಡ್ಡಿ ಹಚ್ಚಿದರು. ತನ್ನ ನಡೆ ಕನ್ನಡ… ನನ್ನ ನುಡಿ ಕನ್ನಡ… ಕನ್ನಡವಿಲ್ಲದೆ ನಾನಿಲ್ಲ. ಅಲ್ಲಿ ಕನ್ನಡ-ಇಲ್ಲಿ ಕನ್ನಡ ಎಂದು ಕನ್ನಡದ ಪುಂಕಾನು ಪುಂಕವಾಗಿ ಭಾಷಣ ಮಾಡುತ್ತಿದ್ದ ಕನ್ನಾಳ್ಮಲ್ಲ ನಡೆಸುತ್ತಿದ್ದ ಕಿಂಡರ್‌ಗಾರ್ಟನ್‌ಗೆ ಕನ್ನಾಳ್ಮಲ್ಲ ಬಾಲ-ವಾಡಿ ಎಂದು ಬೋರ್ಡ್ ಮೇಲೆ ಬರೆೆಯಿಸಿದ್ದ. ಬೋರ್ಡಿನಲ್ಲಿ ಬಾಲ ಎಂಬ ಅಕ್ಷರದ ಮುಂದೆ ಕೋತಿಯ ಬಾಲದ ಚಿತ್ರವನ್ನೂ ಸಹ ಬರೆಯಿಸಿದ್ದ. ಎಲ್ಲರೂ ಬೋರ್ಡುಗಳನ್ನು ಬದಲಾಯಿಸುತ್ತಿದ್ದಾರೆ. ನಾನೂ ಬದಲಾಯಿಸದಿದ್ದರೆ ಮುಂದಿನ ದಿನಗಳಲ್ಲಿ ಏನೇನು ಆಗಬಹುದೋ ಎಂದು ಗಾಬರಿಯಾದ ಹುಜುರ್ ಚಂದ್ರನು ತನ್ನ ಹುಜುರ್ ಬಿಸಿರೈಸ್ ಅಂಗಡಿಯನ್ನು ಹು-ಜೂರ್ ಅನ್ನದ ಅಂ.ಗಡಿ ಎಂದು ಬರೆಯಿಸಿ ಹಾಕಿಸಿಕೊಂಡ. ಬೇರೆ ಊರಿನ ಸೆಂಟ್ರಲ್ ಜೈಲಿನಲ್ಲಿ ಎಸ್‌ಡಿಸಿ ಆಗಿದ್ದ ತಿಗಡೇಸಿ ಊರಿಗೆ ಬಂದ. ತಿಗಡೇಸಿಯನ್ನು ಕಂಡರೆ ಊರವರಿಗೆ ಬಲು ಗೌರವ. ಆತ ಊರಿಗೆ ಬಂದ ಕೂಡಲೇ ಎಲ್ಲರ ಅಂಗಡಿಗಳ ಮೇಲೆ ಬೋರ್ಡುಗಳನ್ನು ನೋಡಿ ಆಶ್ಚರ್ಯಗೊಂಡ. ಮರುದಿನವೇ ಎಲ್ಲರ ಸಭೆ ಕರೆದು ಏನಿದು ಎಂದು ಕೇಳಿದಾಗ…ಇಲ್ಲಿ ಅರ‍್ಯಾರೋ ಮೆಸೇಜ್ ಕಳಿಸಿದರಂತೆ ಅದಕ್ಕಾಗಿ ಈ ರೀತಿ ಮಾಡಿದ್ದೇವೆ ಎಂದು ಹೇಳಿದರು. ಊರಿಗೆ ಹೋದ ತಿಗಡೇಸಿ…ಮೊದಲು ಹೇಗಿತ್ತೋ ಹಾಗೆ ಹೆಸರಿಡಿ ಎಂದು ಮೆಸೇಜ್ ಕಳುಹಿಸಿದ. ಮರುದಿನ ಮೊದಲಿದ್ದ ಹಾಗೆ ಅಂಗಡಿಗಳ ಮೇಲೆ ಬೋರ್ಡು ರಾರಾಜಿಸುತ್ತಿದ್ದವು.