ಹುಬ್ಬಳ್ಳಿ: ಬೆಳಗಾವಿ-ಹುನಗುಂದ-ರಾಯಚೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ೩೨೦ ಕಿ.ಮೀ ರಸ್ತೆ ನಿರ್ಮಾಣಕ್ಕಾಗಿ ಈ ಹಿಂದೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಕಾಮಗಾರಿಗೆ ಅನುಮೋದನೆ ದೊರಕಿದೆ. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ದೇಶದ ಕೆಲವು ಪ್ರಮುಖ ಮಾರ್ಗಗಳಲ್ಲಿ ಕೇಂದ್ರ ಸರಕಾರ ‘ಎಕಾನಾಮಿಕ್ ಕಾರಿಡಾರ್’ ಘೋಷಿಸಿದ್ದು, ಇದರಡಿ ರಾಯಚೂರಿನಿಂದ ಬೆಳಗಾವಿಯವರೆಗಿನ ಹೆದ್ದಾರಿಯೂ ಸೇರಿದೆ. ಕಾಮಗಾರಿಯೂ ವೇಗ ಪಡೆಯಲಿದೆ. ಈ ಹೊಸ ಹೆದ್ದಾರಿ ಪೂರ್ಣಗೊಂಡಲ್ಲಿ ಮೀರಜ್-ಸೊಲ್ಲಾಪುರ ಮಾರ್ಗದ ಈಗಿರುವ ಹತ್ತು ಗಂಟೆ ಪ್ರಯಾಣದ ಅವಧಿ ಕೇವಲ ೫-೬ ಗಂಟೆಗೆ ತಗ್ಗಲಿದೆ. ಬೆಳಗಾವಿ-ಹುನಗುಂದ ೧೬೮ ಕಿ.ಮೀ ಮತ್ತು ಹುನಗುಂದ-ರಾಯಚೂರ ೧೫೬ ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಸಚಿವ ಜೋಶಿ ಅವರು ತಿಳಿಸಿದ್ದಾರೆ.