ಬೆಳಗಾವಿ – ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಪುನರಾರಂಭ

KSRTC
Advertisement

ಬೆಳಗಾವಿ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಈ ಹಿನ್ನೆಲೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರವನ್ನು ಕೆಎಸ್​ಆರ್​ಟಿಸಿ ಅಧಿಕಾರಿಗಳು ಮರು ಆರಂಭ ಮಾಡಿದ್ದಾರೆ. ಬೆಳಗಾವಿ-ಮಹಾರಾಷ್ಟ್ರ ನಡುವೆ ಬೆಳಗಾವಿಯಿಂದ 400ಕ್ಕೂ ಹೆಚ್ಚು ಬಸ್ ಸಂಚರಿಸುತ್ತಿದ್ದು, ರಾಜ್ಯದಿಂದ ಮಹಾರಾಷ್ಟ್ರದ ವಿವಿಧ ನಗರಗಳಿಗೆ ಬಸ್ ಸಂಚಾರ ಆರಂಭಗೊಂಡಿದೆ. ಬೆಳಗಾವಿ ಹಾಗೂ ಇತರ ಭಾಗಗಳಿಂದ ಮಹಾರಾಷ್ಟ್ರದ ಕೊಲ್ಲಾಪುರ, ನಾಸಿಕ, ಮುಂಬೈ, ಪುಣೆ ಮತ್ತಿತರ ನಗರಗಳಿಗೆ ಬಸ್‌ಗಳು ಸಂಚರಿಸುತ್ತಿದೆ. ಚಿಕ್ಕೋಡಿಯಿಂದ ಪ್ರತಿದಿನ 200ಕ್ಕೂ ಹೆಚ್ಚು ಬಸ್​ಗಳು ಮಹಾರಾಷ್ಟ್ರದ ವಿವಿಧ ನಗರ, ಪಟ್ಟಣಗಳಿಗೆ ತೆರಳುತ್ತಿದ್ದವು. ಈಗ 110 ಬಸ್​ಗಳು ಮಾತ್ರ ಮಹಾರಾಷ್ಟ್ರಕ್ಕೆ ತೆರಳಿವೆ. ಕಾಗವಾಡ ಮಾರ್ಗ ಹಾಗೂ ನಿಪ್ಪಾಣಿ ಮಾರ್ಗವಾಗಿ ಬಸ್​ಗಳು ಸಂಚರಿಸುತ್ತಿವೆ.
ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಮರು ಆರಂಭ ಚಿಕ್ಕೋಡಿ ವಿಭಾಗದಿಂದ ಬಸ್​ಗಳ ಸಂಚಾರ ಮರು ಪ್ರಾರಂಭಿಸಲಾಗಿದೆ. ಆದರೆ ಪೂರ್ಣ ಪ್ರಮಾಣದ ಸಂಚಾರಕ್ಕೆ ಸಾರಿಗೆ ನಿಗಮದ ಹಿರಿಯ ಅಧಿಕಾರಿಗಳು ಇನ್ನೂ ಸಮ್ಮತಿಸಿಲ್ಲ. ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದು ಪುಂಡಾಟಿಕೆ ಮೆರೆದಿದ್ದರಿಂದ ಎರಡು ದಿನಗಳಿಂದ ಮಹಾರಾಷ್ಟ್ರಕ್ಕೆ ತೆರಳುವ ಬಸ್‌ಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಎರಡು ದಿನಗಳ ಬಳಿಕ ಮತ್ತೆ ಬಸ್‌ಗಳ ಸಂಚಾರ ಪುನಾರಂಭ ಮಾಡಲಾಗಿದ್ದು ಪರಿಸ್ಥಿತಿ ಅವಲೋಕಿಸಿ ಹಂತ-ಹಂತವಾಗಿ ಬಸ್‌ಗಳ ಸಂಚಾರ ಹೆಚ್ಚಿಸಲಾಗುತ್ತದೆ ಎನ್ನಲಾಗಿದೆ. ಬೆಳಗಾವಿ ಗಡಿ ವಿವಾದ ತಾರಕಕ್ಕೇರಿದ ಪರಿಣಾಮ ಬುಧವಾರ ಬೆಳಗ್ಗೆಯಿಂದ ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.