ಹುಬ್ಬಳ್ಳಿ: ಬೆಳಗಾವಿಯಿಂದ ನನಗೆ ಟಿಕೆಟ್ ಸಿಗಲಿದ್ದು, ನಾನೇ ಸ್ಪರ್ಧಿಸುತ್ತೇನೆ, ನಾಳೆಯ ಒಳಗೆ ಅಧಿಕೃತ ಟಿಕೆಟ್ ಘೋಷಣೆಯಾಗಲಿದೆ. ಬೆಳಗಾವಿಯ ಪ್ರಮುಖರೊಂದಿಗೂ ನಾನು ಎರಡ್ಮೂರು ಸಲ ಮಾತಾಡಿದ್ದೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಿಂದ ನನಗೆ ಟಿಕೆಟ್ ಸಿಗುತ್ತದೆ. ಇದರಲ್ಲಿ ಸಂಶಯವಿಲ್ಲ. ಅಧಿಕೃತ ಘೋಷಣೆಯಾದ ಬಳಿಕ ಬೆಳಗಾವಿಗೆ ಹೋಗುತ್ತೇನೆ. ಪ್ರಚಾರ ಪ್ರಾರಂಭಿಸುತ್ತೇನೆ ಎಂದರು.
ಮುಖಂಡರಾದ ಅಭಯ್ ಪಾಟೀಲ್, ಡಾ.ಪ್ರಭಾಕರ್ ಕೋರೆ, ಅನಿಲ ಬೆನಕೆ, ಈರಣ್ಣ ಕಡಾಡಿ ಜೊತೆ ಮಾತಾಡಿದ್ದೇನೆ. ಅಭಯ್ ಪಾಟೀಲ್ ಜೊತೆ ಮಂಗಳವಾರ ಸಂಜೆ ಮಾತಾಡಿದ್ದೇನೆ ಎಲ್ಲರೂ ಸೇರಿ ಚುನಾವಣೆ ಮಾಡೋಣ ಎಂದಿದ್ದಾರೆ. ಮತ್ತೊಮ್ಮೆ ಮೋದಿಯವರು ಪ್ರಧಾನಿ ಆಗಬೇಕು ಎಂಬುದು ಎಲ್ಲರ ಆಶಯ ಆಗಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ತಮ್ಮ ಕೆಲಸಕ್ಕೆ ದೆಹಲಿಗೆ ಹೋಗಿರಬಹುದು. ನನಗೆ ಟಿಕೆಟ್ ತಪ್ಪಿಸುವ ಕುತಂತ್ರ, ಷಡ್ಯಂತ್ರ ನಡೆದಿದೆ ಎಂದು ನಾನು ಒಪ್ಪಲ್ಲ. ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಎನ್‌ಡಿಎ ೪೦೦ ಪ್ಲಸ್ ಗೆಲ್ಲುವ ವಾತಾವರಣವಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಪಿಟೇಷನ್ ಇದೆ, ಹೀಗಾಗಿ ಸ್ವಲ್ಪ ಅಸಮಾಧಾನ ಸಹಜ. ಯಾರು ಕೈಯಲ್ಲೂ ಬಿಜೆಪಿ ಸಿಕ್ಕಿಲ್ಲ. ಎಲ್ಲಾ ನಿರ್ಧಾರಗಳನ್ನು ದೆಹಲಿಯಲ್ಲಿ ನಮ್ಮ ನಾಯಕರು ಮಾಡುತ್ತಾರೆ ಎಂದರು.
ಟಿಕೆಟ್ ಹಂಚಿಕೆ ವಿಚಾರದಲ್ಲಿ ಇಂತಹವರ ಕೈವಾಡವಿದೆ ಎಂದು ಹೇಳುವುದು ತಪ್ಪು, ಬಿ.ಎಲ್. ಸಂತೋಷ್ ವಿಚಾರದಲ್ಲಿ ನಾನು ಏನೂ ಕಮೆಂಟ್ ಮಾಡುವುದಿಲ್ಲ. ಬಿಜೆಪಿಗೆ ಬಂದ ಮೇಲೆ ಬಿ.ಎಲ್. ಸಂತೋಷ್ ಜೊತೆ ಒಮ್ಮೆಯೂ ಮಾತುಕತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.