ಬೆಳಗಾವಿ ಜಿಲ್ಲೆಗೆ ಬರ ಅಧ್ಯಯನ ತಂಡ ಭೇಟಿ

Advertisement

ಬೆಳಗಾವಿ: ಜಿಲ್ಲೆಯ ಎಲ್ಲ ಹದಿನೈದು ತಾಲ್ಲೂಕುಗಳಲ್ಲಿ ಬಿತ್ತನೆ ಸಂದರ್ಭದಲ್ಲಿ ಮೂರು ವಾರಕ್ಕಿಂತ ಹೆಚ್ಚು ಅವಧಿಯವರೆಗೆ ಮಳೆಯಾಗಿರಲಿಲ್ಲ. ಆದ್ದರಿಂದ ಬರ‌ ಪರಿಸ್ಥಿತಿ ಎದುರಾಗಿದೆ.
ಜಿಲ್ಲೆಯ ಹದಿನೈದು ತಾಲ್ಲೂಕುಗಳ ಪೈಕಿ ಬೆಳಗಾವಿ ಮತ್ತು ಖಾನಾಪುರ ಹೊರತುಪಡಿಸಿ 13 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರಕಾರ ಘೋಷಿಸಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.

ಜಿಲ್ಲೆಯ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಆಗಮಿಸಿರುವ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಕೇಂದ್ರ ಬರ ಅಧ್ಯಯನ ತಂಡಕ್ಕೆ ಶುಕ್ರವಾರ(ಅ.6) ನಗರದ ಪ್ರವಾಸಿ ಮಂದಿರದಲ್ಲಿ ಅವರು ಮಾಹಿತಿಯನ್ನು ನೀಡಿದರು.

ಜೂನ್ ಮಾಹೆಯಲ್ಲಿ ಮಳೆ ಬಾರದಿರುವುದರಿಂದ ಯಾವುದೇ ರೀತಿಯ ಬಿತ್ತನೆಕಾರ್ಯ ಆರಂಭಗೊಳ್ಳಲಿಲ್ಲ.
ಜುಲೈ ಮೊದಲ ಮೂರು ವಾರ ಮಳೆ ಬಂದಿರಲಿಲ್ಲ; ಕೊನೆಯ ವಾರದಲ್ಲಿ ಮಾತ್ರ ಮಳೆಯಾಗಿದ್ದರಿಂದ ಆಗ ಬಿತ್ತನೆಕಾರ್ಯ ಆರಂಭಗೊಂಡಿತು.

ಆಗಸ್ಟ್ ಮಾಹೆಯಲ್ಲೂ ಮಳೆಕೊರತೆಯಾಗಿದ್ದರಿಂದ ರಾಜ್ಯ ಸರಕಾರವು ಬರ ಪರಿಸ್ಥಿತಿಯನ್ನು ಘೋಷಣೆ ಮಾಡಿತು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು.

ಎಲ್ಲ ಹದಿಮೂರು ತಾಲ್ಲೂಕುಗಳಲ್ಲಿ ಮಳೆಕೊರತೆಯಿಂದ ತೀವ್ರ ಬರ ಪರಿಸ್ಥಿತಿ ಎದುರಾಗಿದ್ದು, ಬೆಳೆಹಾನಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ಮಾಹಿತಿಯನ್ನು ನೀಡಿದರು.

ಬೆಳೆಹಾನಿ, ಕುಡಿಯುವ ನೀರಿನ ಕೊರತೆ, ಮೇವು ಕೊರತೆ ಹಾಗೂ ಸಮಸ್ಯೆ ಪರಿಹಾರಕ್ಕೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು.

ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಆಯುಕ್ತರಾದ ವೈ.ಎಸ್.ಪಾಟೀಲ ಅವರು, ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಮಳೆಕೊರತೆಯಿಂದಾಗಿ ಅನೇಕ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು ಎಂದು ತಿಳಿಸಿದರು.

ಕೇಂದ್ರ ಬರ ಅಧ್ಯಯನ ತಂಡ:

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ತಂಡವು ಜಿಲ್ಲೆಗೆ ಭೇಟಿ ನೀಡಿದ್ದು, ವಿವಿಧ ತಾಲ್ಲೂಕುಗಳಲ್ಲಿ ಸಂಚರಿಸಿ ಬೆಳೆಹಾನಿಯನ್ನು ವೀಕ್ಷಿಸುವ ಮುಂಚೆ ಪ್ರವಾಸಿಮಂದಿರದಲ್ಲಿ ಅಧಿಕಾರಿಗಳ ಜತೆ ಚರ್ಚೆ ನಡೆಸಿತು.

ಇದಾದ ಬಳಿಕ ಜಿಲ್ಲೆಯ ಬರ ಪರಿಸ್ಥಿತಿಯನ್ನು ಪ್ರತಿಬಿಂಬಿಸುವ ಛಾಯಾಚಿತ್ರಗಳನ್ನು ಕೇಂದ್ರ ಅಧ್ಯಯನ ತಂಡವು ವೀಕ್ಷಿಸಿತು.

ಎಣ್ಣೆಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ಕೆ.ಪೊನ್ನುಸ್ವಾಮಿ, ಕೇಂದ್ರ ಆರ್ಥಿಕ ವೆಚ್ಚ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹೇಂದ್ರ ಚಂಡೇಲಿಯಾ, ನೀತಿ ಆಯೋಗದ ಸಂಶೋಧನಾ ಅಧಿಕಾರಿ ಶಿವಚರಣ ಮೀನಾ, ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಆಯುಕ್ತರಾದ ವೈ.ಎಸ್.ಪಾಟೀಲ ಅವರು ತಂಡದಲ್ಲಿದ್ದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್, ಕೃಷಿ ಇಲಾಖೆಯ ಹಿರಿಯ ಅಧಿಕಾರಿ ಡಾ.ವಿ.ಜೆ.ಪಾಟೀಲ, ಬೆಳಗಾವಿ ಜಿಲ್ಲೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಉಪ ನಿರ್ದೇಶಕ ಡಾ.ಎಚ್.ಡಿ.ಪಾಟೀಲ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ರಾಜೀವ್ ಕೂಲೇರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.