ಬೆಳಗಾವಿ : ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಯಾರಿಗೂ ಹೇಳದೇ ಮಹಾರಾಷ್ಟ್ರದ ಎನ್‌ಸಿಪಿ ಶಾಸಕ ರೋಹಿತ್ ಪವಾರ್ ಬೆಳಗಾವಿಗೆ ಭೇಟಿ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ.
ಬೆಳಗಾವಿಯ ಮಹಾ ವಿಕಾಸ ಅಘಾಡಿ ನಾಯಕರ ಸೂಚನೆ ಮೇರೆಗೆ ಅವರು ಬೆಳಗಾವಿಗೆ ಬಂದಿದ್ದರು ಎಂದು ಗೊತ್ತಾಗಿದೆ. ರೋಹಿತ್ ಪವಾರ್ ಪುಣೆ ಜಿಲ್ಲೆಯ ಕರ್ಜತ್-ಜಮ್ಕೆಡ್ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದಾರೆ.
ಕೊಲ್ಲಾಪುರ-ಕೂಗನೊಳ್ಳಿ ಮಾರ್ಗವಾಗಿ ಸೋಮವಾರ ರಾತ್ರಿಯೇ ಬೆಳಗಾವಿಗೆ ಆಗಮಿಸಿದ್ದರು. ಮಂಗಳವಾರ ಬೆಳಿಗ್ಗೆ ಬೆಳಗಾವಿ ತಾಲೂಕಿನ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದಲ್ಲದೇ ಅನಾರೋಗ್ಯಕ್ಕೆ ತುತ್ತಾಗಿರುವ ಎಂಇಎಸ್ ಬೆಳಗಾವಿ ನಗರ ಅಧ್ಯಕ್ಷ ದೀಪಕ ದಳವಿ ಮನೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದ್ದಾರೆ. ನಂತರ ಈ ಹಿಂದೆ ಗೋಲಿಬಾರ್‌ನಲ್ಲಿ ಮೃತಪಟ್ಟವರ ಹೆಸರಿನಲ್ಲಿ ನಿರ್ಮಿಸಲಾದ ಹುತಾತ್ಮ ಸ್ಮಾರಕಕ್ಕೆ ಭೇಟಿ ನೀಡಿ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದಾರೆ.
ಯಳ್ಳೂರ ಗ್ರಾಮದಲ್ಲಿರುವ ಮಹಾರಾಷ್ಟ್ರ ಹೈಸ್ಕೂಲ್‌ಗೆ ರೋಹಿತ್ ಪವಾರ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಸ್ಥಳೀಯ ಎಂಇಎಸ್ ಕಾರ್ಯಕರ್ತರು ಅವರಿಗೆ ಸಾಥ್ ನೀಡಿದರು. ನಂತರ ಪವಾರ್ ಮಹಾರಾಷ್ಟ್ರಕ್ಕೆ ವಾಪಸಾದರು.