ಧಾರವಾಡ: ಅತ್ಯಂತ ಕುತೂಹಲ ಕೆರಳಿಸಿರುವ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರ ಬದಲಿಗೆ ತಮಗೆ ಟಿಕೆಟ್ ನೀಡಿ ಎಂದು ಅದೇ ಪಕ್ಷದವರಾದ ಮೇಯರ್, ಈರೇಶ ಅಂಚಟಗೇರಿ ಟಿಕೆಟ್ ಕೇಳಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ ಹಾಲಿ ಶಾಸಕ ಅರವಿಂದ ಬೆಲ್ಲದ ಅವರಿಗೆ ಟಿಕೆಟ್ ದೊರೆಯುವುದು ಬಹುತೇಕ ಖಚಿತವಿದ್ದರೂ ಅದೇ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯ ಕೊನೆಯ ಘಳಿಗೆಯಲ್ಲಿ ಮಹಾಪೌರ ಈರೇಶ ಅಂಚಟಗೇರಿ ಅವರು ತಾವೂ ಟಿಕೆಟ್ ಆಕಾಂಕ್ಷಿ ಎಂದು ಮನವಿ ಸಲ್ಲಿಸಿರುವುದು ಕುತೂಹಲ ಕೆರಳಿಸಿದೆ.
ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕರಿದ್ದಾಗಲೂ ಮೇಯರ್ ಟಿಕೆಟ್ ಕೇಳಿರುವುದು ಕ್ಷೇತ್ರದ ಮತದಾರರಲ್ಲಿ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅಲ್ಲದೇ ಕರ್ನಾಟಕದ ಹೈಕಮಾಂಡ್ ಎಂದೇ ಹೆಸರಾಗಿರುವ ಪ್ರಹ್ಲಾದ ಜೋಶಿ ಅವರ ಆಪ್ತ ವಲಯದಲ್ಲಿ ಶಾಸಕ ಅರವಿಂದ ಬೆಲ್ಲದ ಮತ್ತು ಈರೇಶ ಅಂಚಟಗೇರಿ ಅವರಿದ್ದು, ಈ ಇಬ್ಬರ ಮಧ್ಯೆಯೇ ಟಿಕೆಟ್‌ಗಾಗಿ ಮುಸುಕಿನ ಗುದ್ದಾಟ ನಡೆದಿರುವುದು ಅನುಮಾನಕ್ಕೀಡು ಮಾಡಿದೆ.