ಗಂಗಾವತಿ: ತಾಲೂಕಿನ ಸಂಗಾಪುರ ಗ್ರಾಮದ ಶ್ರೀರಂಗದೇವರಾಯಲು ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ ೩೨ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಜರುಗಿದೆ.
ಒಂದನೇ ತರಗತಿಯಿಂದ ಐದನೇ ತರಗತಿವರೆಗಿನ ೩೨ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಂಗಳವಾರ ಶಾಲೆಗೆ ಬಂದು ಮಧ್ಯಾಹ್ನದ ಬಿಸಿಯೂಟ ಮಾಡಿದ ಕೆಲ ಸಮಯದಲ್ಲೇ ವಾಂತಿ ಭೇದಿಗೀಡಾಗಿ ಅಸ್ವಸ್ಥರಾದರು. ಪಾಲಕರಿಗೆ ಸುದ್ದಿ ತಿಳಿಯುತ್ತಿದ್ದಂತೆ ಅವರು ಶಾಲೆಯ ಎದುರುಗಡೆ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ದಾಖಲಿಸಿದರು. ೫ಕ್ಕೂ ಹೆಚ್ಚು ಮಕ್ಕಳಿಗೆ ಗ್ಲೂಕೋಸ್ ಹಾಕಲಾಗಿದ್ದು, ಇನ್ನುಳಿದ ವಿದ್ಯಾರ್ಥಿಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಕಲುಷಿತ ನೀರು, ಕಳಪೆ ಆಹಾರದಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿರಬಹುದು ಎನ್ನಲಾಗಿದೆ.