ಬಿರಿಯಾನಿ ಸೇವಿಸಿದ್ದ ವಿದ್ಯಾರ್ಥಿನಿ ಸಾವು

ಬಿರಿಯಾನಿ
Advertisement

ಮಂಗಳೂರು: ಕಲುಷಿತ ಆಹಾರ ಸೇವಿಸಿ ವಿದ್ಯಾರ್ಥಿನಿ ಅನಾರೋಗ್ಯಕ್ಕೀಡಾಗಿ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಕಾಸರಗೋಡಿನ ಹೋಟೆಲೊಂದರಿಂದ ಆನ್‌ಲೈನ್ ಆರ್ಡರ್ ಮೂಲಕ ಕುಝಿಮಂದಿ ಎಂಬ ಬಿರಿಯಾನಿ ಸೇವಿಸಿದ್ದ ಕಾಸರಗೋಡು ಸಮೀಪದ ಪೆರುಂಬಳ ಎಂಬಲ್ಲಿನ ಅಂಜುಶ್ರೀ ಪಾರ್ವತಿ(೨೦) ಮೃತಪಟ್ಟಿದ್ದಾರೆ.
ಅಂಜುಶ್ರೀ ಪಾರ್ವತಿ ಕಾಸರಗೋಡಿನ ರೊಮಾನ್ಸಿಯಾ ಎಂಬ ಹೊಟೇಲ್ ನಿಂದ ಡಿ. ೨೧ರಂದು ಆಹಾರ ತರಿಸಿ ಸೇವಿಸಿದ್ದರು. ನಂತರ ಅಸೌಖ್ಯಕ್ಕೀಡಾಗಿದ್ದ ಇವರನ್ನು ಕಾಸರಗೋಡಿನ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶನಿವಾರ ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಂಜುಶ್ರೀ ಪಾರ್ವತಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಶಾಲೆಯ ಬಿ.ಕಾಂ ವಿದ್ಯಾರ್ಥಿನಿ.
ವಿದ್ಯಾರ್ಥಿನಿಯ ಪೋಷಕರು ಈ ಕುರಿತು ದೂರು ನೀಡಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆದೇಶಿಸಿದ್ದಾರೆ. ಆಹಾರ ಸುರಕ್ಷತಾ ಆಯುಕ್ತರಿಗೆ ಈ ಕುರಿತು ವರದಿ ಸಲ್ಲಿಸಲು ಸೂಚಿಸಲಾಗಿದೆ. ಯುವತಿಗೆ ನೀಡಲಾದ ಚಿಕಿತ್ಸೆ ಕುರಿತು ಜಿಲ್ಲಾ ವೈದ್ಯಾಧಿಕಾರಿ ಪರಿಶೀಲಿಸುತ್ತಿದ್ದಾರೆ. ಕಲುಷಿತ ಆಹಾರ ಸರಬರಾಜು ಮಾಡುವ ಹೋಟೆಲ್‌ಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಸಚಿವೆ ತಿಳಿಸಿದ್ದಾರೆ.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಂದು ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗುವುದು. ಮೇಲ್ಪರಂಬ ಠಾಣಾ ಪೊಲೀಸರು ಅಸಹಜ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.