ಮಹದಾಯಿ ವಿಚಾರದಲ್ಲಿ ಬಿಜೆಪಿ ಸುಳ್ಳಿನ ಮೇಲೆ ಸುಳ್ಳು ಹೇಳುತ್ತ ಕಾಲಹರಣ ಮಾಡುತ್ತಿದೆ. ಒಂದು ಸುಳ್ಳನ್ನು ಮುಚ್ಚಲು ಹೋಗಿ ಮತ್ತೊಂದು ಸುಳ್ಳು ಹೇಳುತ್ತ ಬಿಜೆಪಿ ಸುಳ್ಳಿನ ವಿಶ್ವವಿದ್ಯಾಲಯವಾಗಿದೆ ಎಂದು ಡಿ.ಕೆ. ಶಿವಕುಮಾರ ಹರಿಹಾಯ್ದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 26 ಜನ ಬಿಜೆಪಿ ಮತ್ತು ಅವರ ಪರವಾದ ಸಂಸದರು ಇದ್ದಾರೆ. ಒಮ್ಮೆಯಾದರೂ, ಮಹದಾಯಿ ಯೋಜನೆ ಕುರಿತು ಅವರು ಪ್ರಧಾನಿ ನರೇಂದ್ರ ಮೋದಿ ಬಳಿ ಮಾತನಾಡಿದ್ದಾರೆಯೇ? ಅವರ ಜೊತೆ ಚರ್ಚಿಸಿ ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆ ಇತ್ಯರ್ಥ ಪಡಿಸಬಹುದಿತ್ತು. ಚುನಾವಣೆ ಸಮೀಪಿಸುತ್ತ ಬಂದಂತೆ ಒಂದಿಲ್ಲೊಂದು ನಾಟಕ ಮಾಡುತ್ತಿದ್ದಾರೆ ಎಂದರು.
ಮಹದಾಯಿ ವಿಷಯದಲ್ಲಿ ಬಿಜೆಪಿ ಹಿಂದಿನಿಂದಲೂ ಜನರ ದಿಕ್ಕು ತಪ್ಪಿಸುತ್ತ ಬಂದಿದೆ. ಗೋವಾ, ಕರ್ನಾಟಕ ಮತ್ತು ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದ್ದರೂ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಾಗಿಲ್ಲ ಎಂದರು.
ನಾವು ಹುಬ್ಬಳ್ಳಿಯಲ್ಲಿ ಮಹದಾಯಿ ಸಮಾವೇಶ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆಯೇ ಬಿಜೆಪಿಯವರು ಎಚ್ಚರಗೊಂಡಿದ್ದಾರೆ. ತರಾತುರಿಯಲ್ಲಿ ದಿನಾಂಕವಿಲ್ಲದ ಡಿಪಿಆರ್ ತೋರಿಸಿ ಸುಳ್ಳಿನ ಕಂತೆ ಬಿಚ್ಚಿಟ್ಟಿದ್ದಾರೆ ಎಂದು ಟೀಕಿಸಿದರು.