ಬೆಂಗಳೂರು: ಬಿ ಜೆ ಪಿ ಯವರು ಸಾರಿಗೆ ಸಂಸ್ಥೆಗಳಿಗೆ ದಯಪಾಲಿಸಿದ ದುರಂತ ಕಥೆಗಳನ್ನು ಮತ್ತೊಮ್ಮೆ ಮಗದೊಮ್ಮೆ ನೆನಪಿಸಲು ನಮಗೆ ಅವರೇ ಅವಕಾಶ ಮಾಡಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಮಳೆ ಬರುತ್ತಿರುವಾಗ ಸಂಸ್ಥೆಯ ವಾಹನದ ಚಾಲಕರು ಕೊಡೆ ಹಿಡಿದುಕೊಂಡು ಚಾಲನೆ ಮಾಡುವ ವಿಡಿಯೋ (ಮನರಂಜನೆಗಾಗಿ ಮಾಡಿದ ವಿಡಿಯೋ ಕುರಿತು) ಕರ್ನಾಟಕ ಬಿಜೆಪಿಯವರು ಟ್ವೀಟ್ ಮಾಡಿ ಮಾಡಿ ಉತ್ತರಕುಮಾರನ ಪೌರುಷವನ್ನು ತೋರಿಸುತ್ತಿರುವುದಕ್ಕೆ ಹಾಗೂ ಅವರ ಈ ಸಂತೋಷಕ್ಕೆ ಕಡಿವಾಣ ಹಾಕಬೇಕಾಗಿದೆಯಲ್ಲ ಎಂಬ ನೋವಿನೊಂದಿಗೆ ಈ ವಿವರಣೆ ನೀಡಲಾಗುತ್ತಿದೆ.
ಕೆಲವರಿಗೆ ಕಣ್ಣಿರುತ್ತದೆ ಆದರೆ ನೋಡಲು ಸಾಧ್ಯವಾಗದ ಸ್ಥಿತಿ, ತಲೆ ಇರುತ್ತದೆ ಬುದ್ದಿಯನ್ನು ಸರಿಯಾಗಿ ಉಪಯೋಗಿಸಲಾಗದ ಪರಿಸ್ಥಿತಿ, ಇವೆಲ್ಲವೂ ಅನ್ವಯಿಸುವುದು ಬಸನಗೌಡ ಪಾಟೀಲ್ ಯತ್ನಾಳ್, ಆರ್ ಅಶೋಕ, ಸಿ. ಎನ್. ಅಶ್ವತ್ಥನಾರಾಯಣ ಹಾಗೂ ಬಿ.ಜೆ.ಪಿ ಕಣ್ಣು, ತಲೆ ಯಾವುದೂ ಸರಿಯಾಗಿ ಕನೆಕ್ಟ್ ಆಗದೆ ಇರೋ ಪಂಡಿತ ಪುತ್ರರು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಈ ವಿಡಿಯೋ ನೋಡಿದರೆ ಚಾಲಕ ಹಿಡಿದಿರುವ ಕೊಡೆ ಮೇಲೆ ಒಂದೇ ಒಂದು ಹನಿ ನೀರು ಕಾಣುತ್ತಿಲ್ಲ ಅದನ್ನು ನೋಡುವ, ಯೋಚಿಸುವ ವ್ಯವಧಾನ, ಬುದ್ದಿಯಾದರೂ ಬೇಡವೇ ಇವರಿಗೆ ? ಬಿ.ಜೆ.ಪಿ ಅವಧಿಯಲ್ಲಿ ರಾಜ್ಯದ ಸಾರಿಗೆ ಸಂಸ್ಥೆಗಳನ್ನು ರೂ.5900 ಕೋಟಿ ಸಾಲದ ಸುಳಿಯಲ್ಲಿ ಮುಳುಗಿಸಿ ಹೋಗಿರುವ ಕೀರ್ತಿವಂತರು ಇವರು. ಅವರ ಅವಧಿಯಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗಿಲ್ಲ. ಡಕೋಟ ಬಸ್ಸುಗಳನ್ನು ಕಲ್ಪಿಸಿರುವ ಸಾಧನೆ ಅವರದ್ದೇ.. ನೇಮಕಾತಿಯಂತೂ ಮರೀಚಿಕೆಯೇ ಸರಿ.. ನಮ್ಮ ಅವಧಿಯಲ್ಲಿ ಹೊರಡಿಸಿದ್ದ ನೇಮಕಾತಿ ಪ್ರಕಟಣೆಗೂ ತಡೆ ನೀಡಿದ್ದ ಕೀರ್ತಿ ಬಿ.ಜೆ.ಪಿ ಅವರಿಗೆ ಸಲ್ಲಬೇಕು. ನಮ್ಮ ಸರ್ಕಾರ ಬಂದೊಡನೆ 5800 ಹೊಸ ಬಸ್ಸುಗಳ ಸೇರ್ಪಡೆಗೆ ಚಾಲನೆ ನೀಡಿದೆ. ಬಿ.ಜೆ.ಪಿ ಅವಧಿಯಲ್ಲಿ ತಡೆ ಹಿಡಿಯಲಾಗಿದ್ದ ನೇಮಕಾತಿಗೆ ಚಾಲನೆ ನೀಡಲಾಗಿದೆ. 13999 ಹುದ್ದೆಗಳು ಖಾಲಿಯಿದ್ದು, ತಾಂತ್ರಿಕ ಸಿಬ್ಬಂದಿ ಹಾಗೂ ಚಾಲಕ ನಿರ್ವಾಹಕರಿಗೆ ನೇಮಕಾತಿ ಪತ್ರವನ್ನು ವಿತರಿಸಲಾಗಿದೆ. ಇತರೆ ನೇಮಕಾತಿ ಪ್ರಕ್ರಿಯೆಗಳು ಜಾರಿಯಲ್ಲಿವೆ. ಬಿ ಜೆ ಪಿಯವರು ಸಾರಿಗೆ ಸಂಸ್ಥೆಗಳಿಗೆ ದಯಪಾಲಿಸಿದ ದುರಂತ ಕಥೆಗಳನ್ನು ಮತ್ತೊಮ್ಮೆ ಮಗದೊಮ್ಮೆ ನೆನಪಿಸಲು ನಮಗೆ ಅವರೇ ಅವಕಾಶ ಮಾಡಿಕೊಡುವುದರ ಹಿಂದಿನ ಉದ್ದೇಶ, ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗ ಪ್ರಚಾರ ನೀಡುವುದು ಎಂದಾದರೆ ನಮಗೇನು ಅಭ್ಯಂತರವಿಲ್ಲ. ಮುಂದುವರೆದು, ಚಾಲಕ ಕೊಡೆ ಹಿಡಿದು ಬಸ್ ಚಾಲನೆ ಮಾಡಿದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಅದರನ್ವಯ, ದಿನಾಂಕ: 23-05-2024 ರಂದು ಧಾರವಾಡ ಘಟಕದ ವಾಹನ ಸಂಖ್ಯೆ ಕೆಎ-25 ಎಫ್-1336 ಬೇಟಗೇರಿ-ಧಾರವಾಡ ಮಾರ್ಗದಲ್ಲಿ ಕಾರ್ಯಾಚರಿಸುತ್ತಿರುವಾಗ ವಾಹನದಲ್ಲಿ ಚಾಲಕರಾಗಿ ಹನುಮಂತಪ್ಪ ಅ ಕಿಲ್ಲೇದಾರ, ಬಿ.ಸಂ-1203 D ಹಾಗೂ ನಿರ್ವಾಹಕರಾಗಿ ಶ್ರೀಮತಿ ಅನಿತಾ ಎಚ್. ಬಿ ಸಂ-396 ರವರು ಕರ್ತವ್ಯ ನಿರ್ವಹಿಸುತ್ತಿದ್ದರು. ಮಳೆ ಬರುತ್ತಿದ್ದ ಆ ಸಮಯದಲ್ಲಿ ಅಂದರೆ ಸುಮಾರು 16:30 ಕ್ಕೆ ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೇ ಖಾಲಿ ಇದ್ದುದರಿಂದ ಚಾಲಕರು ಮನೋರಂಜನೆಗಾಗಿ ನಿರ್ವಾಹಕರ ಬಳಿ ಇದ್ದ ಕೊಡೆಯನ್ನು ಪಡೆದು, ಹಿಡಿದುಕೊಂಡು ವಾಹನ ಚಾಲನೆ ಮಾಡಿರುತ್ತಾರೆ. ಇದನ್ನು ಸದರಿ ನಿರ್ವಾಹಕಿಯು ವಿಡಿಯೋ ಚಿತ್ರೀಕರಣ ಮಾಡಿರುತ್ತಾರೆ.
ಆ ಸಮಯದಲ್ಲಿ ಚಾಲಕರ ಮೇಲಿನ ಛಾವಣಿಯಾಗಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದ ಛಾವಣಿಯಾಗಲಿ ಸೋರಿಕೆ (Roof Leakage) ಇರಲಿಲ್ಲ . ವಾಹನದ ಛಾವಣಿ ಸೋರಿಕೆ ಬಗ್ಗೆ ಚಾಲಕ, ನಿರ್ವಾಹಕರ, ಪ್ರಯಾಣಿಕರ ಯಾವುದೇ ದೂರು ಸಹ ದಾಖಲು ಆಗಿರುವುದಿಲ್ಲ. ಸದರಿ ವಾಹನವನ್ನು ವಿಭಾಗದ ತಾಂತ್ರಿಕ ಶಿಲ್ಪಿಗಳಿಂದ ಪರಿಶೀಲನೆ ಮಾಡಲಾಗಿ ಮೇಲ್ಚಾವಣಿಯು ಸೋರದೆ ಇರುವುದನ್ನು ಖಚಿತಪಡಿಸಿಕೊಂಡಿರುತ್ತಾರೆ. ಈ ರೀತಿಯ ಬೇಜಾವಬ್ದಾರಿತನದಿಂದ ವರ್ತಿಸಿ, ಸಂಸ್ಥೆಯ ಘನತೆಗೆ ಧಕ್ಮೆ ತಂದ ಚಾಲನಾ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದಿದ್ದಾರೆ.