ಬಿಜೆಪಿ ಶುದ್ಧೀಕರಣ ನನ್ನ ಗುರಿ

ಡಿ ವಿ ಸದಾನಂದಗೌಡ
Advertisement

ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಯನ್ನು ಬಿ.ವೈ.ವಿಜಯೇಂದ್ರ ಕಳೆದುಕೊಳ್ಳಲಿದ್ದಾರೆ ಎಂದಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿಕೆಯನ್ನು ಅನುಮೋದಿಸಿರುವ ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ವಿಜಯೇಂದ್ರ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಕೂಡ ಹುದ್ದೆ ಕಳೆದುಕೊಳ್ಳಲಿದ್ದಾರೆ ಎಂದು ವಿಸ್ತರಿಸಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಕುಟುಂಬದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಮೋದಿ ಅವರ ಭ್ರಷ್ಟಾಚಾರ ವಿರೋಧಿ ಹಾಗೂ ಪರಿವಾರ ವಿರೋಧಿ ರಾಜಕಾರಣದ ತದ್ವಿರುದ್ಧದ ರಾಜಕಾರಣ ಕರ್ನಾಟಕ ಬಿಜೆಪಿಯಲ್ಲಿ ನಡೆಯುತ್ತಿದೆ. ರಾಜ್ಯ ಘಟಕದ ಶುದ್ಧೀಕರಣ ದೃಷ್ಟಿಯಿಂದ ನಾನು ಕಾಂಗ್ರೆಸ್ ಸೇರುವುದಿಲ್ಲ. ಮೋದಿ ಅವರ ಕನಸಿನ ಬಿಜೆಪಿ ರಾಜ್ಯದಲ್ಲಿ ಅನುಷ್ಠಾನಗೊಳಿಸುವುದೇ ನನ್ನ ಗುರಿ ಎಂದು ಪರೋಕ್ಷವಾಗಿ ಯಡಿಯೂರಪ್ಪ ಮತ್ತು ಕುಟುಂಬಕ್ಕೆ ಎಚ್ಚರಿಕೆ ಕೊಟ್ಟರು. ಗುರುವಾರ ಬೆಂಗಳೂರಿನ ಡಾಲರ್ಸ್ ಕಾಲನಿ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಾನು ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದೆ. ಆಗ ಒಬ್ಬ ಮಾಜಿ ಮುಖ್ಯಮಂತ್ರಿ, ಇಬ್ಬರು ಮಾಜಿ ಡಿಸಿಎಂಗಳು ಹಾಗೂ ಕೆಲವು ಮಾಜಿ ಸಚಿವರು ಚುನಾವಣೆಗೆ ನಿಲ್ಲಲೇಬೇಕು ಎಂದು ಹುರಿದುಂಬಿಸಿದರು. ಆದರೆ ನಂತರ ಟಿಕೆಟ್ ಬೇರೆಯವರಿಗೆ ಘೋಷಿಸಲಾಯಿತು. ನನಗೆ ಟಿಕೆಟ್ ಸಿಗದಿರುವುದಕ್ಕೆ ನೋವಾಗಿದೆ. ನನಗೆ ಅನ್ಯಾಯ ಮಾಡಿದವರು ಮುಂದಿನ ದಿನಗಳಲ್ಲಿ ಪಶ್ಚಾತ್ತಾಪಪಡಲಿದ್ದಾರೆ ಎಂದು ನೊಂದು ನುಡಿದರು.ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿದ್ದು ನಿಜ. ಆದರೆ ನಾನು ಬಿಜೆಪಿ ಶುದ್ಧೀಕರಣ ಮಾಡುತ್ತೇನೆಯೇ ವಿನಃ ಅನ್ಯಪಕ್ಷಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.