ಬೆಳಗಾವಿ: ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಶಾಸಕ ಅನಿಲ ಬೆನಕೆಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆಯೇ ಪಾಲಿಕೆಯ ಉಪಮೇಯರ್ ಸೇರಿದಂತೆ ಉತ್ತರದ ಕೆಲ ನಗರ ಸೇವಕರು ಪಕ್ಷದ ನಿರ್ಧಾರಕ್ಕೆ ಸೆಡ್ಡು ಹೊಡೆದಿದ್ದಾರೆ.
ಕಳೆದ ದಿನ ರಾತ್ರಿಯಿಂದಲೇ ಬಿಜೆಪಿ ಕಾರ್ಯಕರ್ತರು ಕಿತ್ತೂರು ಚನ್ನಮ್ಮ ವೃತ್ತ ಮತ್ತು ಸಂಸದೆ ಮನೆ ಮುಂದೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಅಸಮಾಧಾನ ಹೊರಹಾಕಿದರು.
ಕಳೆದ ಹಲವು ವರ್ಷಗಳಿಂದ ಪಕ್ಷದ ನಿಷ್ಠಾವಂತರಾಗಿ ಬೆನಕೆ ಅವರು ಕೆಲಸ ಮಾಡುತ್ತ ಬಂದಿದ್ದಾರೆ, ಅವರಿಗೆ ಟಿಕೆಟ್ ಸಿಗಬೇಕು ಎನ್ನುವುದು ನಮ್ಮ ಆಸೆ. ಆದ್ದರಿಂದ ಪಕ್ಷದ ನಾಯಕರು ತಮ್ಮ ನಿರ್ಧಾರವನ್ನು ಪುನರ್ ಪರಿಶೀಲನೆ ನಡೆಸಬೇಕು ಎಂದು ಕಾರ್ಯಕರ್ತರು ಮನವಿ ಮಾಡಿಕೊಂಡರು.
ಉತ್ತರ ವಿಧಾನಸಭೆ ಕ್ಷೇತ್ರದ ಬಿಜೆಪಿಯ ಕೆಲ ನಗರಸೇವಕರು ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವ ಒತ್ತಡವನ್ನು ಅನಿಲ ಬೆನಕೆ ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆ. ಇದೆಲ್ಲದರ ನಡುವೆ ಅನಿಲ ಬೆನಕೆ ಪಕ್ಷೇತರವಾಗಿ ಕಣಕ್ಕಿಳಿಯುವ ಚಿಂತನೆ ನಡೆಸಿದ್ದಾರೆ. ಇಂದು ಸಂಜೆ ಬೆಳಗಾವಿಗೆ ಆಗಮಿಸಲಿರುವ ಅವರು ತಮ್ಮ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ಮುಂದಿನ ನಿರ್ದಾರ ಪ್ರಕಟಿಸಲಿದ್ದಾರೆ.