ಬೆಂಗಳೂರು: ಇಂದು ಬಿಜೆಪಿಯು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ. ಪ್ರಜಾ ಪ್ರಣಾಳಿಕೆ ಹೆಸರಿನಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಿದ್ದು, ವಿವಿಧ ಕ್ಷೇತ್ರಗಳ ಗಣ್ಯರ ಸಲಹೆ ಪಡೆದು ಈ ಪ್ರಣಾಳಿಕೆ ತಯಾರು ಮಾಡಲಾಗಿದೆ ಎಂದಿದ್ದಾರೆ, ಈ ಬಾರಿ ಪ್ರಣಾಳಿಕೆಯಲ್ಲಿ ಬಿಜೆಪಿ ಬಿಪಿಎಲ್ ಕುಟುಂಬಕ್ಕೆ ವರ್ಷಕ್ಕೆ ಮೂರು ಉಚಿತ ಅಡುಗೆ ಅನಿಲ ಸಿಲಿಂಡರ್ ನೀಡುವ ಭರವಸೆ ನೀಡಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ದಿನ ಅರ್ಧ ಲೀಟರ್ ಉಚಿತ ಹಾಲು, ತಿಂಗಳಿಗೆ 5 ಕೆಜಿ ಸಿರಿಧಾನ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ. ಪ್ರತಿ ವಾರ್ಡ್‌ನಲ್ಲಿ ಅಟಲ್ ಆಹಾರ ಕೇಂದ್ರಗಳನ್ನು ಸ್ಥಾಪನೆ ಮಾಡುವುದಾಗಿ ತಿಳಿಸಿದ್ದು, ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ತಿಂಡಿ-ಊಟ ನೀಡುವುದಾಗಿ ತಿಳಿಸಿದೆ. ಸರ್ವರಿಗೂ ಸೂರು ಯೋಜನೆಯಡಿ ಮನೆ ಇಲ್ಲದ ಎಲ್ಲರಿಗೂ ಮನೆ ಕಟ್ಟಿಕೊಡುವ ಭರವಸೆ ನೀಡಿದೆ. ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ ಯೋಜನೆಯಡಿ ಎಸ್‌ಸಿ, ಎಸ್‌ಟಿ ಮಹಿಳೆಯರಿಗೆ 10000 ರೂಪಾಯಿ ಫಿಕ್ಸೆಡ್ ಡಿಪಾಸಿಟ್ ಮಾಡುವುದಾಗಿ ತಿಳಿಸಿದೆ. ಹಿರಿಯ ನಾಗರೀಕರಿಗೆ ಪ್ರತಿ ವರ್ಷ ಉಚಿತ ವೈದ್ಯಕೀಯ ತಪಾಸಣೆಯನ್ನು ಒದಗಿಸುವುದಾಗಿ ಹೇಳಿದೆ. ಪಕ್ಷದ ಸಂಸದೀಯ ಮಂಡಳಿ ಸದಸ್ಯ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಚುನಾವಣಾ ಪ್ರಣಾಳಿಕೆ ಸಲಹಾ ಸಮಿತಿ ಸಂಚಾಲಕ, ಸಚಿವ ಡಾ.ಕೆ.ಸುಧಾಕರ್ ಬಿಜೆಪಿ ರಾಜ್ಯಾಧ್ಯಕ್ಷ ಹಾಜರಿದ್ದರು.